ಪತ್ರಿಕೋದ್ಯಮ	
ಸುದ್ದಿಯ ಸಂಗ್ರಹಣೆ ಹಾಗೂ ಸಂವಹನೆ, ವೃತ್ತಪತ್ರಿಕೆಗಳ ಹಾಗೂ ನಿಯತಕಾಲಿಕೆಗಳ ಸಂಪಾದನೆ, ಅವಕ್ಕಾಗಿ ಬರವಣಿಗೆ, ಅವುಗಳ ಸಂಘಟನೆ ಮತ್ತು ನಿರ್ವಹಣೆ, ಜಾಹೀರಾತು, ಪ್ರಸಾರಣ ಮುಂತಾದ ಕಲಾಪಗಳನ್ನು ಪತ್ರಿಕೋದ್ಯಮ (ಜರ್ನಲಿಸಂ) ಎಂದು ಕರೆಯಲಾಗಿದೆ. ಆಧುನಿಕ ಸಮೂಹ ಸಂಪರ್ಕ ಮಾಧ್ಯಮಗಳಲ್ಲಿ ಪತ್ರಿಕೆಯು ವಿದ್ಯುನ್ಮಾನ ಮಾದ್ಯಮದ ಹೊರತಾಗಿಯೂ ಪ್ರಭಾವ ಉಳಿಸಿಕೊಳ್ಳಲು ಶಕ್ತವಾಗಿದೆ. ಪ್ರಜಾಪ್ರಭುತ್ವಗಳಲ್ಲಿ ಪತ್ರಿಕೋದ್ಯಮಕ್ಕೆ ವಿಶೇಷ ಸ್ಥಾನವುಂಟು. ಸಾಕ್ಷರತೆ ಹಬ್ಬಿದಂತೆಲ್ಲಾ ಇದರ ಪ್ರಾಮುಖ್ಯವೂ ಬೆಳೆಯುತ್ತಿದೆ. ರೇಡಿಯೋ, ದೂರವಾಣಿ ಮುಂತಾದವು ಹೆಚ್ಚು ಹೆಚ್ಚು ಬಳಕೆಗೆ ಬಂದಂತೆ, ಪ್ರಚಲಿತ ವಿದ್ಯಮಾನಗಳನ್ನು ಕುರಿತ ಎಲ್ಲ ಸಂವಹನವನ್ನೂ ಪತ್ರಿಕೋದ್ಯಮದ ಅಡಿಯಲ್ಲಿ ಸೇರಿಸುವುದು ಸಾಮಾನ್ಯವಾಗಿದೆ.

	ಪತ್ರಿಕೆಗಳನ್ನು ನಡೆಸುವುದು ಸುಲಭವೇನಲ್ಲ. ಶತಮಾನಗಳ ಹಿಂದೆಯೇ ಆರಂಭವಾದ ಈ ಉದ್ಯಮ ಹಲವಾರು ಮಜಲುಗಳನ್ನು ದಾಟಿ ಇಂದಿನ ಸ್ವರೂಪ ತಳೆದಿದೆ. ಇಂದು ಒಂದು ಬೃಹತ್ ಉದ್ಯಮವಾಗಿ ಬೆಳೆದಿದೆ. ದೊಡ್ಡ ಪತ್ರಿಕೆಯೊಂದನ್ನು ನಡೆಸಲು ಬೇಕಾಗುವ ಬಂಡವಾಳ ಈಗ ಸಾಮಾನ್ಯರ ನಿಲುವಿಗೆ ಮೀರಿದ್ದಾಗಿದೆ. ಇದು ಹಲವು ಬಗೆಯ ಒತ್ತಡಗಳಿಗೆ ಗುರಿಯಾಗತೊಡಗಿದೆ. ಎಷ್ಟೇ ಆತಂಕಗಳಿದ್ದರೂ ಸಮಾನ ಆದರ್ಶ, ಆಕಾಂಕ್ಷೆ, ರಾಜಕೀಯ ತತ್ತ್ವಗಳಲ್ಲಿ ವಿಶ್ವಾಸ ಮತ್ತು ಪರಂಪರೆಗಳನ್ನು ಹಂಚಿಕೊಳ್ಳುವ ಸಾಧನವಾಗಿ ಪತ್ರಿಕೋದ್ಯಮ ಬೆಳೆದು ಬಂದಿದೆ.

	ದಿನದ ಸುದ್ದಿಯನ್ನು ಜಗತ್ತಿನ ಯಾವುದೇ ಮೂಲೆಯಿಂದ ಓದುಗರಿಗೆ ಒದಗಿಸುವ ಸತ್ವಶಾಲೀ ಮಾಧ್ಯಮ ವೃತ್ತಪತ್ರಿಕೆ. ಸುದ್ದಿಯ ಪ್ರಸಾರ, ಅದರ ಹಿನ್ನೆಲೆಯ ವಿಶ್ಲೇಷಣೆ, ಸಮಾಜದಲ್ಲಿ, ದೇಶದಲ್ಲಿ ಸಂಭವಿಸುತ್ತಿರುವ ಬದಲಾವಣೆಗಳ ಪರಿಚಯ, ವಿವಿಧ ಜ್ಞಾನ ಕ್ಷೇತ್ರಗಳ ಬೆಳವಣಿಗೆಯ ವಿವೇಚನೆ, ವಾದಮಂಡನೆ ಮುಂತಾದವೆಲ್ಲ ಇದರ ಕಾರ್ಯಭಾರಗಳಾಗಿವೆ. ಪತ್ರಿಕೆಯನ್ನು ದೈನಂದಿನ ವಿಶ್ವಕೋಶ ಎಂದೇ ಕರೆಯಲಾಗಿದೆ. ಅನೇಕ ವೇಳೆ ಇದು ಆಡಳಿತ ವ್ಯವಸ್ಥೆಯನ್ನು ಎದುರು ಹಾಕಿಕೊಂಡಿರುವುದುಂಟು. ತಾನು ಪ್ರತಿಪಾದಿಸುವ ಮೌಲ್ಯಗಳಿಗಾಗಿ ನಾನಾ ಬಗೆಯ ಸವಾಲುಗಳನ್ನೆದುರುಸಬೇಕಾಗಿ ಬಂದದ್ದುಂಟು. ಹಲವು ವೇಳೆ ಇದು ಒಂದು ವಿಶಿಷ್ಟ ಹಿತಾಸಕ್ತಿಯ ಪ್ರತಿಪಾದಕವಾಗಿಯೂ ಪರಿಣಮಿಸಿದ್ದುಂಟು.

	ಪತ್ರಿಕೋದ್ಯಮದ ವಿಕಾಸ : ಸುದ್ದಿಯ ಸರಬರಾಜು ಅತ್ಯಂತ ಪ್ರಾಚೀನ ಉದ್ಯಮ. ಅದು ಎಂದು ಆರಂಭವಾಯಿತು ಎಂಬುದು ಅಸ್ಪಷ್ಟವಾಗಿದೆ. ಕ್ರಿ.ಪೂ. 60ರಷ್ಟು ಹಿಂದೆಯೇ ರೋಮನ್ ಚಕ್ರಾಧಿಪತ್ಯದ ಅಧಿಪತಿ ಜ್ಯೂಲಿಯಸ್ ಸೀಸóರ್ ಭಿತ್ತಿಪತ್ರದ ಮೂಲಕ ತನ್ನ ಪ್ರಜೆಗಳಿಗೆ ಪ್ರತಿದಿನದ ಸುದ್ದ ತಿಳಿಸಲು ಆರಂಭಿಸಿದ.

	ನಾಗರಿಕತೆ ಹಬ್ಬಿದಂತೆ, ಪ್ರಾದೇಶಿಕ ದೂರ ಸಂಕುಚಿತಗೊಂಡಂತೆ ಜನರು ಸುದ್ದಿಗಾಗಿ ಹಂಬಲಿಸತೊಡಗಿದರು. ಪಟ್ಟಣಗಳು ಮತ್ತು ವಾಣಿಜ್ಯ ಬೆಳೆದಂತೆ ದೂರ ಪ್ರದೇಶಗಳಲ್ಲಿ ನಡೆಯುವ ಘಟನೆಗಳನ್ನು ತಿಳಿಯುವ ಕುತೂಹಲ ಹೆಚ್ಚಾಯಿತು. ಜ್ಞಾನಪ್ರಸಾರದ ವೇಗ ಹೆಚ್ಚಿಸಬೇಕೆಂಬ ಆಕಾಂಕ್ಷೆಯ ಪರಿಣಾಮವಾಗಿ ಮುದ್ರಣ ಯಂತ್ರದ ಉಪಜ್ಞೆಯಾಯಿತು. ಮುದ್ರಣಕಾರರೇ ಪತ್ರಿಕೋದ್ಯಮದ ಆದ್ಯ ಪ್ರವರ್ತಕರು. ಸುದ್ದಿಗಾಗಿ ಅವರು ಪ್ರಯಾಣಿಕರನ್ನು ಅವಲಂಬಿಸಿದ್ದರು. ನೌಕೆಗಳಲ್ಲಿ ಕೆಲಸ ಮಾಡುತ್ತಿದ್ದ ಗುಲಾಮರನ್ನೂ ಸುದ್ದಿ ತಲುಪಿಸುವ ದೂತರನ್ನಾಗಿ ಬಳಸಲಾಗುತ್ತಿತ್ತು.

	ಆಗ ಈಗಿನಂತೆ ಪೂರ್ಣ ಪ್ರಮಾಣದ ಪತ್ರಿಕೆಗಳಿರಲಿಲ್ಲ. ಪತ್ರಿಕೋದ್ಯಮ ಆರಂಭವಾದ್ದೇ ಸುದ್ದಿಪತ್ರಗಳ ಮೂಲಕ. ಮುದ್ರಣಕ್ಕೆ ನಿಗದಿಯಾದ ಕಾಲವಿರಲಿಲ್ಲ. ಸುಮಾರು 1784ರಲ್ಲಿ ಬಳಕೆಗೆ ಬಂದ ಟಪ್ಪಾಲು ಬಂಡಿಯಿಂದಾಗಿ ಸುದ್ದಿ ಸರಬರಾಜಿನ ವೇಗ ತೀವ್ರಗೊಂಡಿತು. ಅಲ್ಲದೆ ಸಾಂಸ್ಕøತಿಕ ಮತ್ತು ಕೈಗಾರಿಕಾ ಕ್ರಾಂತಿಗಳು ಪತ್ರಿಕೋದ್ಯಮಕ್ಕೆ ಪುಟ ನೀಡಿದುವು.

	ಬ್ರಿಟನ್ನಿನಲ್ಲಿ 17ನೆಯ ಶತಮಾನದಲ್ಲಿ ಸುದ್ದಿಪತ್ರಗಳು ಆರಂಭವಾದುವು. ಅನಂತರ ಸುದ್ದಿ ಪುಸ್ತಕಗಳು ಪ್ರಚಾರಕ್ಕೆ ಬಂದುವು. ಇವು 18ನೆಯ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ಪೂರ್ಣ ಪ್ರಮಾಣದ ಪತ್ರಿಕೆಗಳ ಮೊದಲ ಹಂತ. ಬ್ರಿಟನ್ನಿನಲ್ಲಿ ಮೊದಲ ಸುದ್ದಿ ಪುಸ್ತಕ ಪ್ರಕಟವಾದ್ದು 1622ರಲ್ಲಿ. ಅದು ವೀಕ್ಲಿ ನ್ಯೂಸ್ ಫ್ರಮ್ ಇಟಲಿ, ಜರ್ಮನಿ, ಹಂಗೇರಿಯ, ಟ್ರಾನ್‍ಸ್‍ಲೇಟೆಡ್ ಓಟ್ ಆಫ್ ದಿ ಲೋ ಡಚ್ ಕಾಪೀ. ಆದರೆ ಇದಕ್ಕೂ ಮುನ್ನ 1541ರಷ್ಟು ಹಿಂದೆಯೇ ಮೆಕ್ಸಿಕನ್ ಸುದ್ದಿಪತ್ರವೊಂದು ಪ್ರಕಟವಾಗಿತ್ತು.

	ಪ್ರಥಮ ಫ್ರೆಂಚ್ ಪತ್ರಿಕೆ ಗೆeóÉಟ್ ಪ್ರಕಟವಾದ್ದು 1631ರಲ್ಲಿ. ಕಾರ್ಡಿನಲ್ ರಿಚೆಲೂ ಅದರ ವ್ಯವಸ್ಥಾಪಕ. ಮೊದಲ ಇಟಾಲಿಯನ್ ಪತ್ರಿಕೆ ಸಿನ್ಸರೋ 1645ರಲ್ಲಿ ಜಿನೇವಾದಲ್ಲಿ ಪ್ರಕಟವಾಯಿತು. ಪ್ರಥಮ ರಷ್ಯನ್ ಪತ್ರಿಕೆ ಆರಂಭವಾದ್ದು 1703ರಲ್ಲಿ. ಇವಕ್ಕೂ ಮುಂಚೆ ಮುದ್ರಣ ಆರಂಭವಾದ್ದು ಮತ್ತು ಸುದ್ದಿಪತ್ರಗಳು ಮುದ್ರಿತವಾದ್ದು ಜರ್ಮನಿಯಲ್ಲಿ. 1609ರಲ್ಲಿ ಎರಡು ಸುದ್ದಿ ಪತ್ರಗಳು ಪ್ರಕಟವಾದುವು ಎನ್ನಲಾಗಿದೆ. ಆದರೆ ಇದಕ್ಕೂ ಮುನ್ನ 1440ರಷ್ಟು ಹಿಂದೆಯೇ ಚೀನೀಯರು ಅಚ್ಚುಮೊಳೆಗಳನ್ನು ತಯಾರಿಸಿದ್ದರು. ಇಂಗ್ಲೆಂಡಿನಲ್ಲಿ ವಿಲಿಯಮ್ ಕ್ಯಾಕ್ಸ್‍ಟನ್ 1476ರಲ್ಲಿ ಮೊದಲ ಅಚ್ಚುಕೂಟವನ್ನು ಸ್ಥಾಪಿಸಿದ. ಜೋಹಾನ್ ಗಟನ್‍ಬರ್ಗ್ 1440ರಲ್ಲೇ ಯೂರೋಪಿನಲ್ಲಿ ಅಚ್ಚುಮೊಳೆಗಳ ಮುದ್ರಣವನ್ನು ಚಾಲ್ತಿಗೆ ತಂದಿದ್ದ.

	ಇಂಗ್ಲೆಂಡಿನಲ್ಲಿ ಆರಂಭವಾದ ಮೊದಲ ಸಂಪೂರ್ಣ ಪತ್ರಿಕೆ ಆಕ್ಸ್‍ಫರ್ಡ್ ಗಜೆಟ್. ಇದು 1665ರಲ್ಲಿ ಪ್ರಾರಂಭವಾಯಿತು, ಸ್ವಲ್ಪ ಕಾಲದ ಅನಂತರ ಇದರ ಹೆಸರು ಲಂಡನ್ ಗೆಜೆಟ್ ಎಂದು ಬದಲಾಯಿತು. ಮಡ್ಡಿಮನ್ ಇದರ ಸಂಪಾದಕ.

	ಬ್ರಿಟಿಷ್ ಸರ್ಕಾರ 1712ರಲ್ಲಿ ಜಾರಿಗೆ ತಂದ ಸ್ಟ್ಯಾಂಪ್ ಅಧಿನಿಯಮ ಪತ್ರಿಕೆಗಳ ಮೇಲೆ ಸುಂಕ ವಿಧಿಸಿತು. ಪರೋಕ್ಷ ಪತ್ರಿಕಾ ನಿರ್ಬಂಧ ಅವುಗಳ ಬೆಳವಣಿಗೆಯನ್ನು ಕುಂಠಿತಗೊಳಿಸಿತು.

	ಮೊದಲ ದಿನಪತ್ರಿಕೆ ಡೈಲಿ ಕೋರಂಟ್ ಲಂಡನ್ ನಗರದಲ್ಲಿ 1702ರಲ್ಲಿ ಸ್ಥಾಪಿತವಾಯಿತು, ಆದರೆ ಅದು ಬದುಕಿದ್ದುದು ಸ್ವಲ್ಪ ಕಾಲ ಮಾತ್ರ. ರಾಬಿನ್‍ಸನ್ ಕ್ರೂಸೋ ಎಂಬ ಸಾಹಸ ಕಾದಂಬರಿ ಬರೆದ ಡ್ಯಾನಿಯಲ್ ಡೇಫೋ ತನ್ನ ಡೇಲಿ ಪೋಸ್ಟ್ ದಿನಪತ್ರಿಕೆಯನ್ನು 1719ರಲ್ಲಿ ಆರಂಭಿಸಿದ. ಡೇಫೋನನ್ನು ಅನುಸರಿಸಿ ಪತ್ರಕರ್ತರಾದ ಇತರ ಸಾಹಿತಿಗಳು ಡೀನ್ ಸ್ವಿಫ್ಟ್, ರಿಚರ್ಡ್ ಸ್ಟೀಲ್ ಮತ್ತು ಜೋಸೆಫ್ ಅಡಿಸನ್.

	ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ಮತ್ತಷ್ಟು ದೈನಿಕಗಳ ಸ್ಥಾಪನೆ ಆಯಿತು. ವಿಲಿಯಮ್ ಹ್ಯಾಜ್‍ಲಿಟ್ 1769ರಲ್ಲಿ ಮಾರ್ನಿಂಗ್ ಕ್ರಾನಿಕಲ್ ದಿನಪತ್ರಿಕೆಯನ್ನು ಆರಂಭಿಸಿದ. ಸಾಹಿತಿಗಳಾದ ಚಾಲ್ರ್ಸ ಲ್ಯಾಂಬ್ ಮತ್ತು ಸ್ಯಾಮ್ಯುಯೆಲ್ ಕೋಲ್‍ರಿಜ್ ಬರೆಯುತ್ತಿದ್ದ ಮಾರ್ನಿಂಗ್ ಪೋಸ್ಟ್ 1772ರಲ್ಲಿ ಅಸ್ತಿತ್ವಕ್ಕ ಬಂತು. ಮತ್ತೊಬ್ಬ ಖ್ಯಾತ ಸಾಹಿತಿ ಚಾಲ್ರ್ಸ್ ಡಿಕನ್ಸ್ ಕೂಡ ಪತ್ರಕರ್ತನಾಗಿದ್ದ, ಈಗಲೂ ಪ್ರಕಟವಾಗುತ್ತಿರುವ ಅತ್ಯಂತ ಹಳೆ ನಿಯತಕಾಲಿಕ ಸ್ಪೆಕ್ಟೇಟರ್ ಸ್ಥಾಪನೆಯಾದ್ದು 1713ರಲ್ಲಿ.

	ಹದಿನೆಂಟನೆಯ ಶತಮಾನದಲ್ಲೇ ಬ್ರಿಟನ್ನಿನಲ್ಲಿ ಪ್ರಾದೇಶಿಕ ಪತ್ರಿಕೆಗಳು ಹುಟ್ಟಿಕೊಂಡುವು. ಸ್ಕಾಟ್ಲೆಂಡಿನ ಮೊದಲ ಪತ್ರಿಕೆ ಎಡಿನ್‍ಬರೊ ಗeóÉಟ್ ಸ್ಥಾಪನೆ 1699ರಲ್ಲಿ. ಉತ್ತರ ಐರ್ಲೆಂಡಿನ ಮೊದಲ ಪತ್ರಿಕೆ ದಿ ನ್ಯೂಸ್ ಲೆಟರ್ 1737ರಲ್ಲಿ ಜನಿಸಿತು.

	ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಭಾರಿ ಬದಲಾವಣೆಗಳು ಆದುವು. ಪತ್ರಿಕೆಗಳ ಮೇಲೆ ವಿಧಿಸಿದ್ದ ಕರ ರದ್ದಾಯಿತು. ರಾಜಕೀಯ ಸ್ವಾತಂತ್ರ್ಯ ಸಿದ್ಧಾಂತಕ್ಕೆ ರೆಕ್ಕೆ ಮೂಡಿತು. ಸುಮಾರು 1848ರಲ್ಲಿ ಆದ ರೋಟೊರಿ ಯಂತ್ರದ ಉಪಜ್ಞೆ ಮುದ್ರಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಎಬ್ಬಿಸಿತು. ಸಂಪರ್ಕ ಕ್ಷೇತ್ರದಲ್ಲಿ ಆಗ ಪ್ರಗತಿಯಿಂದ ಪತ್ರಿಕೋದ್ಯಮಕ್ಕೆ ಸಹಾಯವಾಯಿತು. 

	ಜನಸಂಖ್ಯೆ ಮತ್ತು ಸಾಕ್ಷರತೆಯ ಏರಿಕೆಗಳು ಪತ್ರಿಕೆಗಳ ಹೆಚ್ಚು ಪ್ರಸಾರಕ್ಕೆ ಅವಕಾಶ ಕಲ್ಪಿಸಿದುವು. ಇದರ ಪರಿಣಾಮವಾಗಿ ಜನಪ್ರಿಯ ಪತ್ರ್ರಿಕೆಗಳು ಹುಟ್ಟಿಕೊಂಡವು. ಲಾರ್ಡ ನಾರ್ತಕ್ಲಿಫ್ 1896ರಲ್ಲಿ ಆರಂಭಿಸಿದ ಡೇಲಿ ಮೇಲ್ ಬ್ರಿಟಿಷ್ ಪತ್ರಿಕೋದ್ಯಮಕ್ಕೆ ಹೊಸ ಚೈತನ್ಯ ತುಂಬಿತು. ಡೇಲಿ ಮೇಲ್ ಅನೇಕ ಸಮೂಹ ಪ್ರಸಾರ ತಂತ್ರಗಳನ್ನು ಅನುಸರಿಸಿತು. ಮೊದಲ ಹಾಗೂ ಎರಡನೆಯ ಮಹಾಯುದ್ಧಗಳ ಕಾಲದಲ್ಲಿ ಬ್ರಿಟಿಷ್ ಪತ್ರಿಕೆಗಳು ಧೀರೋದಾತ್ತ ಪಾತ್ರವಹಿಸಿದುವು.

	ಗ್ರೇಟ್ ಬ್ರಿಟನ್ನಿನಲ್ಲಿ ಪ್ರಕಟವಾಗುವ ರಾಷ್ಟ್ರೀಯ ಬೆಳಗಿನ ದೈನಿಕಗಳಲ್ಲಿ ಉತ್ಕøಷ್ಟ ಪತ್ರಿಕೆಗಳ ವರ್ಗಕ್ಕೆ ಸೇರಿರುವವು ದಿ ಟೈಮ್ಸ್, ದಿ ಡೇಲಿ ಟೆಲಿಗ್ರಾಫ್ ಮತ್ತು ಫೈನಾನ್ಷಿಯಲ್ ಟೈಮ್ಸ್.

	ಡೇಲಿ ಮಿರರ್, ಡೇಲಿ ಮೇಲ್, ಡೇಲಿ ಎಕ್‍ಪ್ರ್ರೆಸ್ ಮತ್ತು ದಿ ಸನ್ ಇವು ಭಾರೀ ಪ್ರಸಾರದ ಜನಪ್ರಿಯ ಪತ್ರಿಕೆಗಳ ವರ್ಗಕ್ಕೆ ಸೇರಿದವು. ಇವಲ್ಲದೆ ಭಾನುವಾರಗಳಲ್ಲಿ ಮಾತ್ರ ಪ್ರಕಟವಾಗುವ ರಾಷ್ಟ್ರೀಯ ಪತ್ರಿಕೆಗಳು ದಿ ಅಬ್ಸರ್ವರ್, ದಿ ಸಂಡೆ ಟೈಮ್ಸ್, ದಿ ಸಂಡೆ ಟೆಲಿಗ್ರಾಫ್, ನ್ಯೂಸ್ ಆಫ್ ದಿ ವಲ್ರ್ಡ, ದಿ ಸಂಡೆ ಪೀಪಲ್, ಸಂಡೆ ಎಕ್ಸ್‍ಪ್ರೆಸ್ ಮತ್ತು ಸಂಡೆ ಮಿರರ್.

	ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಪ್ರಕಟವಾದ ಮೊದಲ ಪತ್ರಿಕೆ ಪಬ್ಲಿಕ್ ಅಕರೆನ್ಸಸ್ ಬೋತ್ ಫಾರಿನ್ ಅಂಡ್ ಡೊಮೆಸ್ಟಿಕ್. ಇದರ ಹುಟ್ಟು 1690ರಲ್ಲಿ ಬಾಸ್ಟನ್ನಿನಲ್ಲಿ. ಪತ್ರಿಕೆಯ ಪ್ರಕಟಣೆ ಆಡಳಿತಗಾರರನ್ನು ಗಾಬರಿಗೊಳಿಸಿತು. ಮೊದಲ ಸಂಚಿಕೆಗೇ ಅವರು ಪತ್ರಿಕೆಯನ್ನು ಹತ್ತಿಕ್ಕಿದರು. ಸಂಪಾದಕ ಬೆಂಜಮಿನ್ ಹ್ಯಾರಿಸ್ ಮಾನಹಾನಿಕಾರಕ ಲೇಖನಗಳನ್ನು ಪ್ರಕಟಿಸಿದನೆಂದು ಕಾರಣ ನೀಡಿದರು.

	ಅಮೆರಿಕದಲ್ಲಿ ಎರಡನೆಯ ಪತ್ರಿಕೆ ಅಸ್ತಿತ್ವಕ್ಕೆ ಬಂದದ್ದು 14 ವರ್ಷಗಳ ಅನಂತರವೇ. ಪೋಸ್ಟ್ ಮಾಸ್ಟರ್ ಆಗಿದ್ದ ಜಾನ್ ಕ್ಯಾಂಪ್‍ಬೆಲ್ 1704ರ ಏಪ್ರಿಲ್ 24ರಂದು ತನ್ನ ಬಾಸ್ಟನ್ ನ್ಯೂಸ್‍ಲೆಟರ್ ಪ್ರಕಟಿಸಿದ. ಆ ಪತ್ರಿಕೆಗೆ ಆಗಾಗ್ಗೆ ಸರ್ಕಾರದಿಂದ ಧನಸಹಾಯ ದೊರೆಯುತ್ತಿತ್ತು. ಸಹಜವಾಗಿಯೇ ಪತ್ರಿಕೆ ಅಧಿಕಾರಿಗಳನ್ನು ಬೆಂಬಲಿಸಿತು.

	ಆಡಳಿತಗಾರರನ್ನು ಎದುರಿಸುವ ಸಾಹಸ ಮಾಡಿದ ಪತ್ರಿಕೆ 1721ರಲ್ಲಿ ಆರಂಭವಾಯಿತು. ಅದೇ ನ್ಯೂ ಇಂಗ್ಲೆಂಡ್ ಕೋರಂಟ್, ಅಮೆರಿಕನ್ ಪತ್ರಿಕೋದ್ಯಮಕ್ಕೆ ನಿರ್ದಿಷ್ಟ ರೂಪ ಕೊಟ್ಟ ಬೆಂಜಮಿನ್ ಫ್ರಾಂಕ್ಲಿನ್ನನ ಸಹೋದರ ಜೇಮ್ಸ್ ಫ್ರಾಂಕ್ಲಿನ್ ಇದರ ಸ್ಥಾಪಕ. ಪತ್ರಿಕೆ ಕೇವಲ ಐದು ವರ್ಷ ಬದುಕಿದ್ದರೂ ಸ್ವತಂತ್ರ ನೀತಿ ಅನುಸರಿಸಿತು. ಅಣ್ಣನ ಬಳಿ ಬೆಂಜಮಿನ್ ಫ್ರಾಂಕ್ಲಿನ್ ತರಬೇತು ಪಡೆದ.

	ಸ್ವಲ್ಪ ಕಾಲದ ಅನಂತರ ಬೆಂಜಮಿನ್ ಫಿಲಡೆಲ್ಫಿಯಕ್ಕೆ ಹೋದ. ಪೆನ್‍ಸಿಲ್ವೇನಿಯ ಗeóÉಟ್ ಪತ್ರಿಕೆಯನ್ನು 1729ರಲ್ಲಿ ಕೊಂಡುಕೊಂಡ. ಅದನ್ನು ಉತ್ತಮ ಸುದ್ದಿ ಮಾಧ್ಯಮವನ್ನಾಗಿ ಮಾರ್ಪಡಿಸಿದ. ಅಮೆರಿಕದ ಮೊದಲ ನಿಯತಕಾಲಿಕ (ಮ್ಯಾಗಜೀನ್) ಸ್ಥಾಪಿಸಿದ ಕೀರ್ತಿಯೂ ಬೆಂಜಮಿನ್ ಫ್ರಾಂಕ್ಲಿನ್ನನಿಗೇ ಸೇರಿದ್ದು.

	ಅಮೆರಿಕದ ಸ್ವಾತಂತ್ಯ್ಯ ಹೋರಾಟದಲ್ಲಿ ಪತ್ರಿಕೆಗಳ ಪಾತ್ರ ಮಹತ್ತರವಾದ್ದು. ಆಗ ಪತ್ರಿಕೆಗಳಲ್ಲಿ ಎರಡು ಬಣಗಳಿದ್ದುವು. ಒಂದು ಬಣ ಬ್ರಿಟಿಷ್ ಆಡಳಿತಗಾರರನ್ನು ಬೆಂಬಲಿಸಿತು. ಮತ್ತೊಂದು ಬಣ ಸ್ವಾತಂತ್ರ್ಯವಾದಿಗಳನ್ನು ಸಮರ್ಥಿಸಿತು. ಸ್ವಾತಂತ್ರ್ಯವಾದಿ ಪತ್ರಿಕೆಗಳು ಸ್ವಾತಂತ್ರ್ಯ ಯೋಧರಲ್ಲಿ ಹುರುಪು ತುಂಬುವಲ್ಲಿ ಯಶಸ್ವಿಯಾದವು. 

	ಉತ್ತರ ಹಾಗೂ ದಕ್ಷಿಣ ರಾಜ್ಯಗಳ ನಡುವ ನಡೆದ ಆಂತರಿಕ ಯುದ್ಧದಲ್ಲೂ ಅಮೆರಿಕನ್ ಪತ್ರಿಕೆಗಳಲ್ಲಿ ಸಹಜವಾಗಿಯೇ ಎರಡು ಬಣಗಳಾದುವು. ಒಂದು ವರ್ಗ ನೀಗ್ರೋ ಗುಲಾಮಗಿರಿಯನ್ನು ವಿರೋಧಿಸಿದರೆ ಮತ್ತೊಂದು ಬೆಂಬಲಿಸಿತು.

	ಅಮೆರಿಕನ್ ಪತ್ರಿಕೋದ್ಯಮ ಹತ್ತೊಂಬತ್ತನೆಯ ಶತಮಾನದ ಅಂತ್ಯದಲ್ಲಿ ಹೊಸ ಮಜಲು ಮುಟ್ಟಿತು. ಹೊಸ ತಂತ್ರಗಳನ್ನು ಬಳಸಿದ ಜೋಸೆಫ್ ಪುಲಿಟ್ಜರ್ ನವ ಪತ್ರಿಕೋದ್ಯಮ ಉದಯಕ್ಕೆ ಕಾರಣನಾದ. ಆತನ ಸೆಂಟ್ ಲೂಯಿ ಪೋಸ್ಟ್ ಡಿಸ್ಪ್ಯಾಚ್ ಮತ್ತು ನ್ಯೂಯಾರ್ಕ್ ಪತ್ರಕೆಗಳು ಹೊಸ ಪತ್ರಿಕಾ ತಂತ್ರಗಳ ಮೂಲಕ ಪ್ರಸಾರ ಮತ್ತು ಜನಪ್ರಿಯತೆ ಎರಡನ್ನೂ ಹೆಚ್ಚಿಸಿಕೊಂಡುವು.

	ಪ್ರಸಾರ ಏರಿಸುವ ಸ್ಫರ್ಧೆ ಕ್ರಮೇಣ ಉಗ್ರವಾಗಿ ಪೀತ ಪತ್ರಿಕೋದ್ಯಮಕ್ಕೆ ದಾರಿಮಾಡಿತು. ವಿಲಿಯಮ್ ರ್ಯಾಂಡಾಲ್ಫ್ ಹಸ್ರ್ಟನ ನ್ಯೂಯಾರ್ಕ ಜರ್ನಲ್ ಮತ್ತು ಪುಲಿಟ್ಜರನ ಪತ್ರಿಕೆ ನ್ಯೂಯಾರ್ಕ ವಲ್ರ್ಡ್ ಪರಸ್ಪರ ಸ್ಪರ್ಧೆಯಲ್ಲಿ ತೊಡಗಿ ಪೀತ ಪತ್ರಿಕೋದ್ಯಮದ ತಂತ್ರವನ್ನು ಅಳವಡಿಸಿಕೊಂಡುವು.

	ಪ್ರಸಾರ ಸ್ಫರ್ಧೆಯಲ್ಲಿ ಅಗ್ರಸ್ಥಾನ ಪಡೆಯಲು ನ್ಯೂಯಾರ್ಕ ಜರ್ನಲ್ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಸ್ಪೇನ್ ದೇಶಗಳ ನಡುವೆ ಕ್ಯೂಬಾ ಯುದ್ಧವನ್ನೇ ಮಾಡಿಸಿತು. ಇದರಲ್ಲಿ ವಲ್ರ್ಡ್ ಹಿಂದೇನೂ ಬೀಳಲಿಲ್ಲ. ಹೊಸ ರೀತಿಯ ವಿನ್ಯಾಸ, ವ್ಯಂಗ್ಯಚಿತ್ರಗಳ ಮತ್ತು ಹಾಸ್ಯ ಚಿತ್ರಗಳ ಬಳಕೆ, ವಿಶಿಷ್ಟ ರೀತಿಯ ಸಾಹಸ ವರದಿಗಳು, ಅಶ್ಲೀಲತೆ, ಓದುಗರಿಗೆ ಯಾವುದಾದರೂ ಬಹುಮಾನದ ಆಮಿಷ, ಇವೆಲ್ಲ ಆಗ ಕಂಡುಬಂದ ಹೊಸ ಪ್ರವೃತ್ತಿಗಳು.

	ಇಪ್ಪತ್ತನೆಯ ಶತಮಾನದಲ್ಲಿ ಅಮೆರಿಕದ ಪತ್ರಿಕೆಗಳ ಬೆಳವಣಿಗೆ ಅಗಾಧವಾದದ್ದು. ಎರಡು ಮಹಾಯುದ್ಧಗಳು ಪರೋಕ್ಷವಾಗಿ ಪತ್ರಿಕಾ ಕ್ಷೇತ್ರದ ಬೆಳವಣಿಗೆಗೆ ಕಾರಣವಾದುವು. ಅಮೆರಿಕದ ಅಧ್ಯಕ್ಷರಲ್ಲಿ ಒಬ್ಬರಾದ ತಿಯೋಡೋರ್ ರೂಸ್óವೆಲ್ಟ್ ಕೂಡ ಪತ್ರಕರ್ತರಾಗಿದ್ದರು. ಅಮೆರಿಕದ ಪ್ರಸಿದ್ಧ ದಿನಪತ್ರಿಕೆಗಳು ನ್ಯೂಯಾರ್ಕ್ ಟೈಮ್ಸ್, ವಾಲ್ ಸ್ಟ್ರೀಟ್ ಜರ್ನಲ್, ವಾಷಿಂಗ್ಟನ್ ಪೋಸ್ಟ್, ಕ್ರ್ರಿಶ್ಚನ್ ಸೈನ್ಸ್ ಮಾನಿಟರ್ ಮತ್ತು ಲಾಸ್ ಏಂಜಲೀಸ್ ಟೈಮ್ಸ್; ಪ್ರಖ್ಯಾತ ನಿಯತಕಾಲಿಕಗಳು ನ್ಯೂಸ್ ವೀಕ್ ಮತ್ತು ಟೈಮ್.

	ಭಾರತದಲ್ಲಿ : ಭಾರತೀಯ ಪತ್ರಿಕೋದ್ಯಮ ಬ್ರಿಟಿಷ್ ಅಥವಾ ಫ್ರೆಂಚ್ ಪತ್ರಿಕೋದ್ಯಮದಂತೆ ಒಂದೇ ಭಾಷೆಯದಲ್ಲ. ಅದು ಬಹುಭಾಷಾ ಪತ್ರಿಕೋದ್ಯಮ.

	ಭಾರತೀಯ ಸಂಪರ್ಕ ವ್ಯವಸ್ಥೆ ಎಂದಿನಿಂದ ಬಳಕೆಯಲ್ಲಿದೆ ಎಂಬುದನ್ನು ನಿರ್ದಿಷ್ಟವಾಗಿ ಹೇಳುವುದು ಕಷ್ಟ. ಅಶೋಕ ಚಕ್ರವರ್ತಿಯ ಕಾಲದಲ್ಲೇ ಸಮೂಹ ಸಂಪರ್ಕ ವ್ಯವಸ್ಥೆ ಇತ್ತು. ಅಶೋಕ ತನ್ನ ಸಂದೇಶಗಳನ್ನು ದೇಶಾದ್ಯಂತ ಸಾರಲು ಕಲ್ಲುಬಂಡೆಗಳು ಮತ್ತು ಕಂಬಗಳನ್ನು ಮಾಧ್ಯಮವನ್ನಾಗಿ ಉಪಯೋಗಿಸಿದ.

	ಮೊಗಲ್ ಚಕ್ರವರ್ತಿಗಳ ಕಾಲದಲ್ಲಿ ಗುಪ್ತಸುದ್ದಿ ಬರಹಗಾರರ ದೊಡ್ಡ ತಂಡವೇ ಇತ್ತು. ಮುದ್ರಣ ಕಲೆ ಭಾರತವನ್ನು ಪ್ರವೇಶಿಸಿದ್ದು ಸ್ವಲ್ಪ ತಡವಾಗಿ. ಅದನ್ನು ಭಾರತಕ್ಕೆ ತಂದವರು ಪೋರ್ಚುಗೀಸ್ ಜೆಸ್ಯೂಯಿಟ್ ಪಾದ್ರಿಗಳು. ಮುದ್ರಣ ಯಂತ್ರಗಳು 1550ರಲ್ಲಿ ಭಾರತವನ್ನು ಪ್ರವೇಶಿಸಿದುವು. ಪಾದ್ರಿಗಳ ಮುಖ್ಯ ಉದ್ದೇಶ ಕ್ರೈಸ್ತಧರ್ಮ ಪ್ರಚಾರ. ಆದರೆ ಮುದ್ರಣ ಮಾಧ್ಯಮವನ್ನು ಅವರುಕೇವಲ ಧರ್ಮಪ್ರಚಾರಕ್ಕಾಗಿಯೇ ಬಳಸಲಿಲ್ಲ; ಜ್ಞಾನಪ್ರಸಾರಕ್ಕೂ ಉಪಯೋಗಿಸಿದರು.

	ಭಾರತದಲ್ಲಿದ್ದ ಈಸ್ಟ್ ಇಂಡಿಯ ಕಂಪನಿಯ ಆಡಳಿತಗಾರರು ಪತ್ರಿಕೆಗಳನ್ನು ಆರಂಭಿಸಲು ವಿರೋಧವಾಗಿದ್ದರು. ಕಂಪನಿಯ ಆಡಳಿತದಿಂದ ಖತಿಗೊಂಡಿದ್ದವರೇ ಮೊದಲು ಪತ್ರಿಕೆಗಳನ್ನು ಸ್ಥಾಪಿಸಲು ಪ್ರಯತ್ನಿಸಿದವರು. ಇಂಥವರ ಪ್ರಥಮ ಪ್ರಯತ್ನ 1776ರಲ್ಲಿ ಕಲ್ಕತ್ತದಲ್ಲಿ ನಡೆಯಿತು.

	ಈಸ್ಟ್ ಇಂಡಿಯ ಕಂಪನಿಯ ಮಾಜಿ ನೌಕರ ವಿಲಿಯಮ್ ಬೋಟ್ಸ್ ಪತ್ರಿಕೆ ಆರಂಭಿಸುವ ತನ್ನ ಇಚ್ಛೆಯನ್ನು ಪ್ರಕಟಿಸಿದ. ಕೂಡಲೇ ಕಂಪನಿ ಅಧಿಕಾರಿಗಳು ಕಕ್ಕಾಬಿಕ್ಕಿಯಾದರು. ಯೂರೋಪಿಗೆ ಹೋಗುವ ಮೊದಲ ನೌಕೆಯಲ್ಲೇ ಅವನನ್ನು ಕಳುಹಿಸಿ ಗಡಿಪಾರು ಮಾಡಿದರು. ಹೀಗೆ ಭಾರತದಲ್ಲಿ ಮೊದಲ ಪತ್ರಿಕೆ ಆರಂಭಿಸುವ ಯೋಜನೆ ಮಣ್ಣುಗೂಡಿತು.

	ಜೇಮ್ಸ್ ಆಗಸ್ಟಸ್ ಹಿಕ್ಕಿ ಭಾರತದಲ್ಲಿ ಮೊದಲು ಪತ್ರಿಕೆ ಹೊರಡಿಸಿದವನು. ಕಲ್ಕತ್ತದಲ್ಲಿ 1780ರ ಜನವರಿ 20ರಂದು ಅವನ ಬೆಂಗಾಲ್ ಗeóÉಟ್ ಅಥವಾ ಕಲ್ಕತ್ತ ಜನರಲ್ ಅಡ್ವರ್ಟೈಸರ್ ವಾರಪತ್ರಿಕೆಯ ಪ್ರಥಮ ಸಂಚಿಕೆ ಹೊರಬಿತ್ತು. ಅವನು ಬಹು ಬೇಗ ತೊಂದರೆಯಲ್ಲಿ ಸಿಲುಕಿದ. ಗವರ್ನರ್-ಜನರಲ್ ವಾರನ್ ಹೇಸ್ಟಿಂಗ್ಸನೇ ಮೊದಲಾದ ಕಂಪನಿ ಅಧಿಕಾರಿಗಳನ್ನು ಅವನು ಕಟುವಾಗಿ ಟೀಕಿಸಿದ. ಅಂಚೆ ಕಛೇರಿಯ ಮೂಲಕ ಪತ್ರಿಕೆ ಪ್ರಸಾರವಾಗದಂತೆ ಸರ್ಕಾರ ಆಜ್ಞೆಮಾಡಿತು. ಹಿಕ್ಕಿಯನ್ನು ಬಂಧಿಸಲಾಯಿತು. ಆದರೆ ಹಿಕ್ಕಿ ಹೆದರಿಲಿಲ್ಲ. ಬಂದೀಖಾನೆಯಿಂದಲೇ ಟೀಕಿಸುವುದನ್ನು ಮುಂದುವರಿಸಿದ. ಸರ್ಕಾರ ಅವನ ಮುದ್ರಣಾಲಯವನ್ನು ಮುಟ್ಟುಗೋಲು ಹಾಕಿಕೊಂಡಿತು. ಬಿಡುಗಡೆಯ ಅನಂತರ ಹಿಕ್ಕಿ ಕಡುಬಡತನದಲ್ಲಿ ನರಳಿ ಸತ್ತ. ಭಾರತದ ಮೊದಲ ಪತ್ರಿಕೆ ದುರ್ಮರಣಕ್ಕೆ ಈಡಾಯಿತು. 

	ಹಿಕ್ಕಿಯ ಅನಂತರ ಅನೇಕರು ಪತ್ರಿಕೆಗಳನ್ನು ಆರಂಭಿಸಿದರು. ಕಲ್ಕತ್ತವೇ ಅಲ್ಲದೆ ಇತರ ಪ್ರಮುಖ ನಗರಗಳಾದ ಮುಂಬಯಿ ಮತ್ತು ಮದರಾಸುಗಳಲ್ಲೂ ಪತ್ರಿಕೆಗಳು ಆರಂಭವಾದುವು. ಪತ್ರಿಕೆಗಳನ್ನು ಸ್ಥಾಪಿಸಿದವರೆಲ್ಲ ಬ್ರಿಟಿಷರೇ. ಭಾರತೀಯರು ಸ್ವಲ್ಪ ಸಮಯದ ಅನಂತರ ಪತ್ರಿಕೆಗಳನ್ನು ಹೊರಡಿಸಲು ಮುಂದೆ ಬಂದರು.

	ಇಂಗ್ಲಿಷ್ ಪತ್ರಿಕೆಗಳು ಇಂಗ್ಲಿಷ್ ಬಲ್ಲವರನ್ನು ಮಾತ್ರ ತಲುಪುತ್ತಿದ್ದುವು. ಹೆಚ್ಚು ಮಂದಿ ಭಾರತೀಯರನ್ನು ತಲುಪಲು ಭಾಷಾಪತ್ರಿಕೆಗಳು ಉತ್ತಮ ಮಾಧ್ಯಮಗಳಾಗಿದ್ದುವು. ಭಾರತೀಯ ಭಾಷಾ ಪತ್ರಿಕೋದ್ಯಮವನ್ನು ಭದ್ರ ಬುನಾದಿಯ ಮೇಲೆ ಸ್ಥಾಪಿಸಿದವರಲ್ಲಿ ರಾಜಾ ರಾಮಮೋಹನ ರಾಯ್ ಅಗ್ರಮಾನ್ಯರು. ಅವರನ್ನು ಸೂಕ್ತವಾಗಿಯೇ ಭಾರತೀಯ ಭಾಷಾಪತ್ರಿಕೋದ್ಯಮದ ಪಿತಾಮಹ ಎಂದು ಕರೆದಿದ್ದಾರೆ. ರಾಮಮೋಹನ ರಾಯ್ ಸ್ಥಾಪಿಸಿದ ಪತ್ರಿಕಗೆಳು ಸಂಬಾದ್ ಕೌಮುದಿ, ಮೀರತ್-ಉಲ್-ಅಕಬಾರ್ ಮತ್ತು ಬ್ರಾಹ್ಮಿನಿಕಲ್ ಮ್ಯಾಗಜೀನ್.

	ಮೊದಲ ಸ್ವಾತಂತ್ರ್ಯ ಸಂಗ್ರಾಮವೆಂದು ವರ್ಣಿಸಲಾದ 1857ರ ಬಂಡಾಯದ ಕಾಲದಲ್ಲಿ ಭಾರತೀಯ ಪತ್ರಿಕೆಗಳು ಹಿಂದೆ ಬೀಳಲಿಲ್ಲ. ಆಂಗ್ಲೋ ಇಂಡಿಯನ್ ಮಾಲೀಕತ್ವದ ಪತ್ರಿಕೆಗಳ ಒಲವು ಬಹುಪಾಲು ಸ್ವಾತಂತ್ರ್ಯ ಹೋರಾಟದ ಪರವಾಗಿತ್ತು. ಗುಪ್ತ ಸುದ್ದಿಪತ್ರಗಳೂ ಪ್ರಸಾರದಲ್ಲಿದ್ದುವು.

	ದೇಶದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಅನೇಕರು ಪತ್ರಿಕಾ ಮಾಧ್ಯಮದ ಶಕ್ತಿಯನ್ನು ಅರಿತಿದ್ದರು. ಬಾಳ ಗಂಗಾಧರ ಟಿಳಕರ ಕೇಸರಿ ಮತ್ತು ಮರಾಠಾ ಪತ್ರಿಕೆಗಳ ಸಿಂಹ ಘರ್ಜನೆಗೆ ಬ್ರಿಟಿಷ್ ಸರ್ಕಾರ ನಡುಗಿತು. ರಾಷ್ಟ್ರೀಯತಾವಾದಿ ಪತ್ರಿಕೆಗಳು ಕರಾಳ ಪತ್ರಿಕಾ ಶಾಸನಗಳನ್ನು ಲೆಕ್ಕಿಸದೆ ಮುನ್ನುಗ್ಗಿದುವು.

	ಸ್ವತಃ ಮಹಾತ್ಮ ಗಾಂಧಿಯವರು ಪತ್ರಿಕೆಗಳನ್ನು ನಡೆಸಿದರು. ಸತ್ಯಾಗ್ರಹ, ಗ್ರಾಮೀಣ ಪುನರುಜ್ಜೀವನ, ಅಸ್ಪøಶ್ಯತೆಯ ನಿವಾರಣೆ ಮುಂತಾದ ತಮ್ಮ ಆದರ್ಶಗಳ ಪ್ರಚಾರಕ್ಕಾಗಿಯೇ ಅವರು ಪತ್ರಿಕೋದ್ಯಮಿಯಾದರು. ಅವರ ಪತ್ರಿಕೆಗಳು ಇಂಡಿಯನ್ ಒಪಿನಿಯನ್, ಯಂಗ್ ಇಂಡಿಯ, ನವಜೀವನ ಮತ್ತು ಹರಿಜನ್, ಜವಾಹರಲಾಲ ನೆಹರೂ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯೊಡನೆ ಸಂಬಂಧ ಇರಿಸಿಕೊಂಡಿದ್ದರು. ನೇತಾಜಿ ಸುಭಾಸ್ ಚಂದ್ರ ಬೋಸ್, ಅರವಿಂದ ಘೋಷ್, ಮೌಲಾನಾ ಅಬ್ದುಲ್ ಕಲಾಮ್ ಆಜಾದ್ ಮತ್ತು ಇತರ ರಾಷ್ಟ್ರೀಯ ನಾಯಕರೂ ಪತ್ರಿಕೋದ್ಯಮದೊಡನೆ ನೇರ ಸಂಪರ್ಕ ಹೊಂದಿದ್ದವರೇ.

	ಸ್ವಾತಂತ್ರ್ಯ ಲಭಿಸಿದ ಅನಂತರ ಭಾರತೀಯ ಪತ್ರಿಕೋದ್ಯಮದ ಗುರಿ ಬದಲಾಯಿತು. ಆ ಮುನ್ನ ಪತ್ರಿಕೆಗಳ ಗುರಿ ಸ್ವಾತಂತ್ರ್ಯಕ್ಕಾಗಿ ಹೋರಾಟ. ಆದರೆ ಸ್ವಾತಂತ್ರ್ಯಾನಂತರ ರಾಷ್ಟ್ರ ನಿರ್ಮಾಣದ ಹೊಸಕಾರ್ಯವನ್ನು ಪತ್ರಿಕೋದ್ಯಮ ಕೈಗೊಳ್ಳಬೇಕಾಯಿತು. ಪತ್ರಿಕಾರಂಗ ಕ್ರಮೇಣ ಬೆಳೆಯಿತು. ರಾಷ್ಟ್ರಜೀವನದಲ್ಲಿ ಪತ್ರಿಕೋದ್ಯಮಕ್ಕೆ ಪ್ರತಿಷ್ಠಿತ ಸ್ಥಾನ ದೊರಕಿತು.

	ಇಂದು ಭಾರತದ ಪತ್ರಿಕೆಗಳನ್ನು ಇಂಗ್ಲಿಷ್ ಮತ್ತು ಭಾಷಾ ಪತ್ರಿಕೋದ್ಯಮ ಎಂದು ವರ್ಗೀಕರಿಸಬಹುದು. ಟೈಮ್ಸ್ ಅಫ್ ಇಂಡಿಯ, ದಿ ಹಿಂದು, ಇಂಡಿಯನ್ ಎಕ್ಸ್‍ಪ್ರೆಸ್, ಹಿಂದೂಸ್ತಾನ್ ಟೈಮ್ಸ್, ಅಮೃತ್ ಬಜಾರ್ ಪತ್ರಿಕಾ, ಸ್ಟೇಟ್ಸ್‍ಮನ್, ಡೆಕನ್ ಹೆರಾಲ್ಡ್ ಇವು ಕೆಲವು ಪ್ರಮುಖ ಇಂಗ್ಲಿಷ್ ದೈನಿಕಗಳು. ಆನಂದ ಬಜಾರ್ ಪತ್ರಿಕಾ ಹಾಗು ಜುಗಾಂತರ (ಬಂಗಾಳಿ), ನವಭಾರತ್ ಟೈಮ್ಸ್ (ಹಿಂದಿ), ಮಲಯಾಳ ಮನೋರಮಾ ಮತ್ತು ಮಾತೃಭೂಮಿ (ಮಲಯಾಳಂ), ತಂತಿ ಹಾಗೂ ದಿನಮಣಿ (ತಮಿಳು), ಪ್ರಜಾವಾಣಿ, ವಿಜಯ ಕರ್ನಾಟಕ(ಕನ್ನಡ) ಮತ್ತು ಲೋಕಸತ್ತಾ (ಮರಾಠಿ) ಹೆಚ್ಚು ಪ್ರಸಾರದ ಮುಖ್ಯ ಭಾಷಾ ದಿನಪತ್ರಿಕೆಗಳು. ಇವಲ್ಲದೆ, ಅನೇಕ ವರ್ಣಮಯ ವಾರಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಪ್ರಕಟವಾಗುತ್ತಿವೆ. ಕನ್ನಡದ ಎರಡು ಪ್ರಮುಖ ವಾರಪತ್ರಿಕೆಗಳು ಸುಧಾ ಮತ್ತು ತರಂಗ.

	ಮುಂದುವರಿದ ದೇಶಗಳ ಪತ್ರಿಕಾ ಪ್ರಸಾರದೊಡನೆ ಹೋಲಿಸಿದಲ್ಲಿ ಭಾರತೀಯ ಪತ್ರಿಕೆಗಳ ಪ್ರಸಾರ ಕಡಿಮೆ. ಜಪಾನಿನಂಥ ಪುಟ್ಟ ದೇಶ ಪತ್ರಿಕೆಗಳ ಪ್ರಸಾರದಲ್ಲಿ ಅನೇಕ ಶ್ರೀಮಂತ ಪಾಶ್ಚಾತ್ಯ ರಾಷ್ಟ್ರಗಳನ್ನು ಹಿಂದೆ ಹಾಕಿದೆ. ಬಹುಮಂದಿ ತಜ್ಞರ ಅಭಿಪ್ರಾಯದಲ್ಲಿ ಯಾವುದೇ ದೇಶದ ಅಭಿವೃದ್ಧಿಯ ಸಂಕೇತ ಅದರ ಪತ್ರಿಕಾ ಪ್ರಸಾರ.

	ಸಾಮಾನ್ಯವಾಗಿ ನಿಯತಕಾಲಿಕಗಳಲ್ಲಿ ಮನರಂಜನೆಗೇ ಹೆಚ್ಚು ಪ್ರಾಧಾನ್ಯ. ಗಂಭೀರ ವಿಚಾರಗಳಿಗೆ ಹಾಗೂ ವಿವಿಧ ಜ್ಞಾನಕ್ಷೇತ್ರಗಳಿಗೆ ಮೀಸಲಾದ ನಿಯತಕಾಲಿಕಗಳು ಹಲವಾರಿವೆ. ದಿನಪತ್ರಿಕೆಗಳಲ್ಲಿ ಅನುದಿನದ ಹಾಗೂ ಅತ್ಯಂತ ಈಚಿನ ಸುದ್ದಿಗೆ ಮಹತ್ತ್ವ. ಹಿಂದಿನ ಸುದ್ದಿಯನ್ನು ಹೆಕ್ಕಿ ಅದನ್ನು ಪ್ರಕಟಿಸುವ ಉದ್ದೇಶವುಳ್ಳ ನಿಯತಕಾಲಿಕೆಗಳೂ ಇವೆ. ಕೆಲವೊಂದು ನಿರ್ದಿಷ್ಟ ವರ್ಗದ ಓದುಗರಿಗೆ ಸೀಮಿತವಾದ ವರ್ಗಪತ್ರಿಕೆಗಳೂ ಸಾಕಷ್ಟು ಸಂಖ್ಯೆಯಲ್ಲಿ ಪ್ರಕಟವಾಗುತ್ತಿವೆ.

	ಸುದ್ದಿಸಂಸ್ಥೆಗಳು : ಪ್ರತಿಯೊಂದು ಪತ್ರಿಕೆಯೂ ಜಗತ್ತಿನ ಎಲ್ಲ ಕಡೆಗಳಿಂದಲೂ ಸುದ್ದಿ ಸಂಗ್ರಹಿಸಲು ತನ್ನದೇ ಆದ ಬಾತ್ಮೀದಾರರನ್ನು ನೇಮಿಸಿಕೊಳ್ಳುವುದು ಅಸಾಧ್ಯ. ಅದಕ್ಕಾಗಿ ಅವು ಸುದ್ದಿಸಂಸ್ಥೆಗಳಿಗೆ ಚಂದಾ ನೀಡುತ್ತವೆ. ಸುದ್ದಿ ಸಂಸ್ಥೆಗಳು ಪ್ರಮುಖ ಅಂತರರಾಷ್ಟ್ರೀಯ ನಗರಗಳಲ್ಲಿ ಸುದ್ದಿ ಸಂಗ್ರಹಿಸಿ ಜಗತ್ತಿನ ಎಲ್ಲೆಡೆ ಇರುವ ಚಂದಾದಾರ ಪತ್ರಿಕೆಗಳಿಗೆ ವಿತರಿಸುತ್ತವೆ. ಬ್ರಿಟನ್ನಿನ ರಾಯಿಟರ್ಸ್, ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಸೋಸಿಯೇಟೆಡ್ ಪ್ರೆಸ್ ಆಫ್ ಅಮೆರಿಕ ಮತ್ತು ಯುನೈಟೆಡ್ ಪ್ರೆಸ್ ಇಂಟರ್ ನ್ಯಾಷನಲ್ ಇವು ಅಂತರರಾಷ್ಟ್ರೀಯ ಖ್ಯಾತಿಯ ಸುದ್ದಿ ಸಂಸ್ಥೆಗಳು. ಆಲಿಪ್ತ ರಾಷ್ಟ್ರಗಳು ತಮ್ಮದೇ ಆದ ವಾರ್ತಾಕೂಟವೊಂದನ್ನು ರಚಿಸಿಕೊಂಡಿವೆ.

	ಲೇಖನೋದ್ಯಮ : ಸುದ್ದಿ ಸಂಸ್ಥೆಗಳೇ ಅಲ್ಲದೆ ಪತ್ರಿಕೆಗಳಿಗೆ ಪ್ರಸಿದ್ಧ ಅಂಕಣಗಾರರ ಅಂಕಣಬರಹಗಳು, ಕಥೆ, ಸಾಹಸ, ವ್ಯಂಗ್ಯ ಮತ್ತು ಹಾಸ್ಯ ಚಿತ್ರಮಾಲಿಕೆಗಳು ಹಾಗೂ ಇತರ ಸಾಮಗ್ರಿಗಳನ್ನು ಒದಗಿಸುವ ಲೇಖನೋದ್ಯಮ ಸಂಸ್ಥೆಗಳೂ ಇವೆ. ಅಮೆರಿಕದ ಕಿಂಗ್ ಫೀಚಸ್ರ್À ಸಿಂಡಿಕೇಟ್, ಯುನೈಟೆಡ್ ಫೀಜರ್ಸ್ ಸಿಂಡಿಕೇಟ್ ಮುಂತಾದ ಲೇಖನೋದ್ಯಮ ಸಂಸ್ಥೆಗಳು ಜಗತ್‍ಪ್ರಸಿದ್ಧ. ಭಾರತದಲ್ಲಿರುವ ಮುಖ್ಯ ಲೇಖನೋದ್ಯಮ ಸಂಸ್ಥೆ ಇಂಡಿಯ ನ್ಯೂಸ್ ಅಂಡ್ ಫೀಚರ್ಸ್ ಅಲೈಯನ್ಸ್ (ಇನ್ಫಾ), ಇಂಡಿಯಾ ಅಬ್ರಾಡ್ ನ್ಯೂಸ್ ಸರ್ವಿಸ್(ಐಎಎಮ್‍ಎಸ್).

	ಶಿಕ್ಷಣ : ಪತ್ರಿಕೋದ್ಯಮ ಶಿಕ್ಷಣ ಕೇವಲ ಒಂದು ಶತಮಾನದಷ್ಟು ಹಳೆಯದು. ಅಮೆರಿಕ ಸಂಯುಕ್ತ ಸಂಸ್ಥಾನಗಳ ಮಿಸೂರಿ ವಿಶ್ವವಿದ್ಯಾಲಯ (ಕೊಲಂಬಿಯ) 1879-84ರಲ್ಲಿ ಜಗತ್ತಿನಲ್ಲಿ ಮೊಟ್ಟಮೊದಲು ಪೂರ್ಣ ಪತ್ರಿಕಾ ಶಿಕ್ಷಣ ನೀಡಲು ಮುಂದಾಯಿತು. ಅನಂತರ 1912ರಲ್ಲಿ ನ್ಯೂಯಾರ್ಕಿನ ಕೊಲಂಬಿಯ ವಿಶ್ವವಿದ್ಯಾಲಯ ಪತ್ರಿಕೋದ್ಯಮದಲ್ಲಿ ಮೊದಲ ಪದವಿ ಶಿಕ್ಷಣ ಆರಂಭಿಸಿತು. ಜೋಸೆಫ್ ಪುಲಿಟ್ಜರ್ ಅದಕ್ಕಾಗಿ ಭಾರಿ ದತ್ತಿ ನೀಡಿದ. ಭಾರತದ ಮೊದಲ ಪತ್ರಿಕೋದ್ಯಮ ಬಿ.ಎ.(1953) ಹಾಗೂ ಎಂ.ಎ. ಸ್ನಾತಕೋತ್ತರ ಪದವಿ ಕೋರ್ಸ್‍ಗಳನ್ನು ಮೈಸೂರು ವಿಶ್ವವಿದ್ಯಾಲಯ ಪ್ರಾರಂಭಿಸಿ ಹೆಗ್ಗಳಿಕೆ ಸಾಧಿಸಿತು. ಈಗ ಭಾರತವೂ ಸೇರಿದಂತೆ ವಿಶ್ವದ ಅನೇಕ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಪತ್ರಿಕೋದ್ಯಮ ಶಿಕ್ಷಣ ನೀಡುತ್ತವೆ. 

	ವೃತ್ತಿ ಸಂಸ್ಥೆಗಳು : ಪತ್ರಕರ್ತರ ಹಿತಾಸಕ್ತಿಗಳನ್ನು ಕಾಪಾಡುವ ಯಾವುದೇ ಸಂಸ್ಥೆ ಬಹುಕಾಲ ಇರಲಿಲ್ಲ. ಪತ್ರಿಕೋದ್ಯಮದ ಪ್ರಾಮುಖ್ಯ ಹೆಚ್ಚಿದಂತೆ ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಮತ್ತು ಸೇವಾ ಸೌಲಭ್ಯಗಳನ್ನು ಹೆಚ್ಚಿಸಿ ಕೊಳ್ಳಲು ವೃತ್ತಿನಿರತರ ಸಂಸ್ಥೆಗಳ ರಚನೆಯಾಯಿತು.

	ಇಂಗ್ಲೆಂಡಿನಲ್ಲಿ ನ್ಯಾಷನಲ್ ಯೂನಿಯನ್ ಆಫ್ ಜರ್ನಲಿಸ್ಟ್ಸ್ 1907ರಲ್ಲಿ ಅಸ್ತಿತ್ವಕ್ಕೆ ಬಂತು. ಭಾರತದಲ್ಲಿರುವ ಪತ್ರಕರ್ತರ ಸಂಸ್ಥೆಗಳು ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಮತ್ತು ಪತ್ರಕರ್ತರ ರಾಷ್ಟ್ರೀಯ ಸಂಘ.

	ಪತ್ರಕರ್ತರೇ ಸ್ವತಃ ನಡೆವಳಿಕೆಗಳನ್ನು ನಿಯಂತ್ರಿಸಿಕೊಳ್ಳಲು ನೀತಿಸಂಹಿತೆಯನ್ನು ರೂಪಿಸಿಕೊಂಡಿರುತ್ತಾರೆ. ಅದರ ನಿಯಮಬದ್ಧ ಉಸ್ತುವಾರಿಗೆ ಕೆಲವು ರಾಷ್ಟ್ರಗಳಲ್ಲಿ ಪತ್ರಿಕಾ ಮಂಡಳಿಗಳೆಂಬ ಸ್ವಾಯುತ್ತ ಸಂಸ್ಥೆಗಳಿವೆ. ಭಾರತದಲ್ಲಿಯೂ 3ನೇ ಪ್ರೆಸ್ ಕೌನ್ಸಿಲ್ ಸ್ಥಾಪಿತಗೊಂಡಿದೆ.

	ವ್ಯವಸ್ಥೆ : ಪತ್ರಿಕೋದ್ಯಮವನ್ನು ಅವಸರದ ಸಾಹಿತ್ಯ ಎಂದು ವರ್ಣಿಸಲಾಗಿದೆ. ವಿಶೇಷತಃ ದಿನಪತ್ರಿಕೆಯ ಕಛೇರಿಯಲ್ಲಿ ಸದಾ ಸಮಯದೊಂದಿಗೆ ಸ್ಪರ್ಧೆ ನಡೆಯುತ್ತಿರುತ್ತದೆ. ಯಾವುದೇ ಕ್ಷಣದಲ್ಲಿ ಜಗತ್ತಿನ ಯಾವುದೇ ಮೂಲೆಯಿಂದ ಕೌತುಕದ ಸುದ್ದಿ ಬರಬಹುದೆಂಬ ಕಾತರ ಇರುತ್ತದೆ. ಬಂದ ಸುದ್ದಿಯನ್ನು ಸಂಪಾದಿಸಿ ಮುದ್ರಿಸುವುದು ಕೆಲವೇ ಗಂಟೆಗಳಲ್ಲಿ ಆಗಬೇಕಾದ ಕೆಲಸ.

	ದೊಡ್ಡ ಪತ್ರಿಕಾಲಯಗಳಲ್ಲಿ ಸಂಪಾದಕೀಯ ವಿಭಾಗಕ್ಕೆ ಸಂಪಾದಕನೇ ಸಾಧಾರಣವಾಗಿ ಯಜಮಾನ. ಸುದ್ದಿ ಸಂಪಾದಿಸಲು ಉಪಸಂಪಾದಕರ ತಂಡ ಇರುತ್ತದೆ; ಸುದ್ದಿ ಸಂಪಾದಕರು, ಸಹಸಂಪಾದಕರು ಇರುತ್ತಾರೆ. ಮುಖ್ಯ ವರದಿಗಾರನ ಕೈಕೆಳಗೆ ವರದಿಗಾರರು ಕಾರ್ಯ ನಿರ್ವಹಿಸುತ್ತಾರೆ. ಸಂಸ್ಥೆಯ ನಿರ್ವಹಣೆಯ ಹೊಣೆ ವ್ಯವಸ್ಥಾಪಕ ಸಂಪಾದಕನದು. ಸಂಸ್ಥೆಯಲ್ಲಿ ಜಾಹೀರಾತು ಮತ್ತು ಪ್ರಸಾರ ವಿಭಾಗಗಳೂ ಇರುತ್ತವೆ.

	ಪತ್ರಿಕೆಯನ್ನು ಮುದ್ರಿಸುವುದು ಮುದ್ರಣ ವಿಭಾಗದ ಹೊಣೆ. ಲೈನೋಟೈಪ್ ಮತ್ತು ಮಾನೋಟೈಪ್ ಯಂತ್ರಗಳು ಸುದ್ದಿ ಮತ್ತಿತರ ವಿಷಯ ಸಾಮಗ್ರಿಗಳನ್ನು ಜೋಡಿಸುತ್ತವೆ. ಕರಡು ತಿದ್ದಿದ ಅನಂತರ ಅದನ್ನು ಗೊತ್ತಾದ ಪುಟಗಳಲ್ಲಿ ವಿನ್ಯಾಸಿಸಲಾಗುತ್ತದೆ. ವಿನ್ಯಾಸವಾದ ಪುಟ ಎರಕದಚ್ಚಿಗೆ ಹೋಗುತ್ತದೆ. ಎರಕವಾದ ಮುದ್ರಣ ಫಲಕಗಳನ್ನು ರೋಟರಿ ಯಂತ್ರಕ್ಕೆ ಜೋಡಿಸಲಾಗುವುದು. ತೀವ್ರ ವೇಗದಲ್ಲಿ ಪತ್ರಿಕೆ ಮುದ್ರಿತವಾಗುತ್ತದೆ. ಆಫ್ಸೆಸೆಟ್ ಯಂತ್ರದ ಆವಿಷ್ಕಾರದ ಪರಿಣಾಮವಾಗಿ ಪತ್ರಿಕೆಗಳನ್ನು ಹಲವು ವರ್ಣಗಳಲ್ಲಿ ಸುಲಭವಾಗಿ ಮುದ್ರಿಸಬಹುದು. ಅಮೆರಿಕ ಸಂಯುಕ್ತ ಸಂಸ್ಥಾನಗಳು, ಬ್ರಿಟನ್, ಪಶ್ಚಿಮ ಜರ್ಮನಿ,ಕೆನಡ, ಜಪಾನ್ ಮುಂತಾದ ದೇಶಗಳಲ್ಲಿ ಪತ್ರಿಕೆಗಳನ್ನು ಮುದ್ರಿಸಲು ಆಫ್ಸೆಟ್ ಯಂತ್ರಗಳನ್ನು ಬಳಸಲಾಗುತ್ತಿದೆ. ಈಗ ಡಿಜಿಟಲ್ ತಂತ್ರಜ್ಞಾನ ಮುದ್ರಣ ವಿಧಾನವನ್ನು ಅತ್ಯಾಧುನಿಕಗೊಳಿಸಿದೆ.

	ಮಹತ್ತ್ವ : ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಇವು ಜನತಂತ್ರದ ಮೂರು ಆಧಾರಸ್ತಂಭಗಳು. ನಾಲ್ಕನೆಯದೇ ಪತ್ರಿಕೋದ್ಯಮ. ಪತ್ರಿಕೆಗಳು ಹುಟ್ಟಿದ ದಿನದಿಂದಲೇ ಆಡಳಿತಗಾರರಿಂದ ಪತ್ರಿಕಾ ಸ್ವಾತಂತ್ರ್ಯಹರಣದ ಕಥೆ ಆರಂಭವಾಯಿತು. ಇಂಗ್ಲೆಂಡಿನಲ್ಲಿ ಖ್ಯಾತಕವಿ ಜಾನ್ ಮಿಲ್ಟನ್ ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದ. ಭಾರತದಲ್ಲಿ ಈ ಹೋರಾಟವನ್ನು ಆರಂಭಿಸಿದವರು ಹಿಕ್ಕಿ ಮತ್ತು ರಾಜಾ ರಾಮಮೋಹನರಾಯ್, ಅಮೆರಿಕದಲ್ಲಿ ಜಾನ್ ಪೀಟರ್ ಜೆóಂಗರ್. 

	ಕಮ್ಯುನಿಸ್ಟ್ ದೇಶಗಳಲ್ಲಿ ಪತ್ರಿಕೆಗಳ ಮೇಲಿನ ಸ್ವಾಮ್ಯ ಸರ್ಕಾರದ ಕೈಯಲ್ಲಿರುತ್ತದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಪತ್ರಿಕೆಗಳ ಒಡೆತನ ಖಾಸಗಿಯವರಿಗೆ ಸೇರಿದ್ದು. ಸರ್ಕಾರ ಪತ್ರಿಕೆಗಳನ್ನು ನಿಯಂತ್ರಿಸುತ್ತದೆ ಎಂದರೆ ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಚಕಾರ ಎಂದು ಪಾಶ್ಚಾತ್ಯ ಪ್ರಜಾಪ್ರಭುತ್ವಗಳಲ್ಲಿ ಭಾವಿಸಲಾಗಿದೆ. ಈಗ ಪತ್ರಿಕೋದ್ಯಮದ ಮೇಲಣ ಬಹುರಾಷ್ಟ್ರೀಯ ಕಾರ್ಪೊರೇಟ್ ಸಂಸ್ಥೆಗಳ ಹಿಡಿತ ಬಿಗಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ.

	ಪತ್ರಿಕೆಗಳೊಡನೆ ತೀವ್ರ ಪೈಪೋಟಿ ನಡೆಸುತ್ತಿರುವ ಇತರ ಎರಡು ಸಮೂಹ ಸಂಪರ್ಕ ಮಾಧ್ಯಮಗಳಾದ ರೇಡಿಯೊ ಮತ್ತು ಟೆಲಿವಿಷನ್ ಸಾಕಷ್ಟು ಜನಪ್ರಿಯವಾಗಿವೆ. ಇವನ್ನು ಎಲೆಕ್ಟ್ರಾನಿಕ್ ಪತ್ರಿಕೋದ್ಯಮ ಎನ್ನುತ್ತಾರೆ. ಅಮೆರಿಕ ಸಂಯುಕ್ತ ಸಂಸ್ಥಾನಗಳ, ಬ್ರಿಟನ್ ಮುಂತಾದ ರಾಷ್ಟ್ರಗಳಲ್ಲಿ ಇವು ಹೆಚ್ಚು ಜಾಹೀರಾತುದಾರರನ್ನು ಆಕರ್ಷಿಸಿ ಪತ್ರಿಕೆಗಳ ಆದಾಯಕ್ಕೆ ಸಂಚಕಾರ ತಂದಿವೆ. ಭಾರತದಂಥ ವಿಕಾಸಶೀಲ ರಾಷ್ಟ್ರದಲ್ಲಿ ಇ. ಮಾಧ್ಯಮಗಳ ಪ್ರಭಾವದ ಹೊರತಾಗಿಯೂ ಪತ್ರಿಕೋದ್ಯಮದ ಭವಿಷ್ಯ ಉಜ್ವಲವಾಗಿದೆ.	
 (ಕೆ.ವಿ.ಎನ್.)

	ಪತ್ರಿಕಾ ಕಾನೂನುಗಳು, ಭಾರತದಲ್ಲಿ : 19ನೆಯ ಶತಮಾನದಲ್ಲಿ ಬ್ರಿಟಿಷ್ ಆಡಳಿತ ಭದ್ರಗೊಳ್ಳುತ್ತಿದ್ದಂತೆಯೇ ಆಧುನಿಕ ಪತ್ರಿಕೋದ್ಯಮದ ಇತಿಹಾಸವೂ ಆರಂಭವಾಯಿತು. ಪತ್ರಿಕೋದ್ಯಮದ ಹಲವಾರು ಅವಶ್ಯಕತೆಗಳನ್ನು ಪೂರೈಸಲು ಮತ್ತು ಈ ಮಾಧ್ಯಮದಿಂದಾಗಿ ಸರ್ಕಾರ ಎದುರಿಸಬೇಕಾಗಿ ಬಂದ ಸಮಸ್ಯಗಳಿಗೆ ಪರಿಹಾರ ಒದಗಿಸುವ ಉದ್ದೇಶದಿಂದ ಆಗಿನಿಂದಲೇ ಕೆಲವು ನಿರ್ದಿಷ್ಟ ಕಾನೂನುಗಳನ್ನು ಜಾರಿಗೆ ತರಲಾಯಿತಲ್ಲದೆ ಇನ್ನು ಕೆಲವು ಕಾನೂನುಗಳಲ್ಲಿ ಇದಕ್ಕೆ ಸಂಬಂಧಿಸಿದ ಅಂಶಗಳನ್ನು ಸೇರಿಸಲಾಯಿತು.

	1867ರ ಪ್ರೆಸ್ ಮತ್ತು ಪುಸ್ತಕ ನೋಂದಣಿ ಅಧಿನಿಯಮ ಭಾರತ ಸಕಾರ ಮೊಟ್ಟಮೊದಲು ಜಾರಿಗೆ ತಂದ ಪತ್ರಿಕಾ ಕಾನೂನು ದೇಶದಲ್ಲಿಯ ಎಲ್ಲ ಮುದ್ರಣಾಲಯಗಳು ಹಾಗೂ ಪತ್ರಿಕೆಗಳನ್ನು ಕ್ರಮಬದ್ಧಗೊಳಿಸುವುದು, ಪ್ರಕಟಿತ ಪುಸ್ತಕಗಳೆಲ್ಲವನ್ನೂ ನೋಂದಾಯಿಸುವುದು ಇವು ಈ ಕಾನೂನಿನ ಉದ್ದೇಶಗಳು. ಅಲ್ಲದೆ ಪ್ರತಿಯೊಂದು ಪತ್ರಿಕೆಯೂ ತನ್ನ ವಾರ್ಷಿಕ ವರದಿಯನ್ನು ಪ್ರೆಸ್ ರಿಜಿಸ್ಟ್ರಾರರಿಗೆ ಕಳಿಸುವುದನ್ನು ಈ ಕಾನೂನಿನಿಂದ ಕಡ್ಡಾಯ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ ಭಾರತದ ಎಲ್ಲ ಭಾಗಗಳಿಗೂ ಇದು ಅನ್ವಯಿಸುತ್ತದೆ. ಇದರ ಅನಂತರ ಬಂದ ಮಹತ್ವ್ತದ ಕಾನೂನು 1868ರ ಭಾರತೀಯ ದಂಡ ಸಂಹಿತೆ (ಇಂಡಿಯನ್ ಪೀನಲ್ ಕೋಡ್). ಪತ್ರಿಕೆಗಳಿಗೆ ಸಂಬಂಧಿಸಿದಂತೆ ಈ ಸಂಹಿತೆಯ ನಿಬಂಧನೆಗಳು ಸಾಕಷ್ಟು ವ್ಯಾಪಕವಾಗಿವೆ. ಸರ್ಕಾರದ ಬಗ್ಗೆ ದ್ವೇಷ, ತ್ವೇಷ, ಅನಾದರ ಉಂಟು ಮಾಡುವುದನ್ನು ಈ ಕಾನೂನು ಪ್ರತಿಬಂಧಿಸುತ್ತದೆ. ದೇಶದ ವಿವಿಧ ವರ್ಗಗಳ ನಡುವೆ ವೈರ ಅಥವಾ ದ್ವೇಷವನ್ನು ಹುಟ್ಟಿಸುವುದು ಈ ಕಾನೂನಿನ ಪ್ರಕಾರ ಅಪರಾಧ. ಅಲ್ಲದೆ ಅಶ್ಲೀಲ ಸಾಹಿತ್ಯ, ಚಿತ್ರ ಮುಂತಾದವನ್ನು ಇದು ಪ್ರತಿಬಂಧಿಸುತ್ತದೆ. 1872ರಲ್ಲಿ ಭಾರತೀಯ ಕರಾರುಗಳ ಅಧಿನಿಯಮ (ಇಂಡಿಯನ್ ಕಾಂಟ್ರ್ಯಾಕ್ಟ್ ಆಕ್ಟ್), 1873ರ ಸಮುದ್ರ ಸುಂಕ ಅಧಿನಿಯಮ (ಸೀಕಸ್ಟಮ್ಸ್ ಆಕ್ಟ್, 1885ರ ಭಾರತೀಯ ತಂತಿ ಅಧಿನಿಯಮ (ಇಂಡಿಯನ್ ಟೆಲಿಗ್ರಾಫ್ ಆಕ್ಟ್), 1898ರ ಭಾರತೀಯ ಅಂಚೆ ಕಛೇರಿ ಅಧಿನಿಯಮ (ಇಂಡಿಯನ್ ಪೋಸ್ಟ್ ಆಫೀಸಸ್ ಆಕ್ಟ್) ಮತ್ತು 1911ರ ರಾಜದ್ರೋಹಾತ್ಮಕ ಸಭ ಪ್ರತಿಬಂಧಕ ಅಧಿನಿಯಮ (ಪ್ರಿವೆನ್ಷನ್ ಆಫ್ ಸಿಡಿಷಸ್ ಮೀಟಿಂಗ್ಸ್ ಆಕ್ಟ್) ಇವು ಸ್ವಾತಂತ್ರ್ಯ ಪೂರ್ವದಲ್ಲಿ ಅಂದಿನ ಭಾರತ ಸರ್ಕಾರ ಜಾರಿಗೆ ತಂದ ಪತ್ರಿಕೋದ್ಯಮಕ್ಕೆ ಸಂಬಂಧಪಟ್ಟ ಕಾನೂನುಗಳು.

	ಕರಾರುಗಳ ಅದಿನಿಯಮದಲ್ಲಿ ಜಾಹೀರಾತು ಅಭಿಕರಣಗಳ (ಏಜೆನ್ಸಿಗಳ) ಹಕ್ಕು ಮತ್ತು ಕರ್ತವ್ಯಗಳನ್ನು ವಿಶದಪಡಿಸಲಾಗಿದೆ. ಕೆಲವೊಂದು ವಸ್ತುಗಳನ್ನು ದೇಶದ ಗಡಿಯ ಒಳಗೆ ತರದಂತೆ ಅಥವಾ ಗಡಿಯ ಹೊರಕ್ಕೆ ಕಳಿಸದಂತೆ ಸಮುದ್ರ ಸುಂಕ ಅಧಿನಿಯಮದ ಅಡಿಯಲ್ಲಿ ಸರ್ಕಾರ ಪ್ರತಿಬಂಧಿಸಬಹುದು. ಇದೇ ಕಾನೂನು ವಿಶೇಷ ಪರಿಸ್ಥಿತಿಗೆ ಮತ್ತು ಸಾರ್ವನಿಕ ಸುರಕ್ಷತೆಗೆ ಸಂಬಂಧಿಸಿದಂಥ ವಾರ್ತೆಯನ್ನು ಹೊರಕ್ಕೆ ಕಳಿಸುವುದನ್ನೂ ಪ್ರತಿಬಂಧಿಸುತ್ತದೆ. ತಂತಿ ಅಧಿನಿಯಮ ಸರ್ಕಾರಕ್ಕೆ ತಂತಿ ಸಂದೇಶಗಳ ವಿಷಯದಲ್ಲಿ ಎರಡು ಬಗೆಯ ಅಧಿಕಾರಗಳನ್ನು ನೀಡುತ್ತದೆ. ಸರ್ಕಾರ, ಅಥವಾ ಸರ್ಕಾರದಿಂದ ವಿಶೇಷ ಅಧಿಕಾರ ಪಡೆದು ನೇಮಕವಾಗಿರುವ ಅಧಿಕಾರಿ ವಿಶೇಷ ಪರಿಸ್ಥಿತಿಯಲ್ಲಿ ಅಥವಾ ಸಾರ್ವಜನಿಕ ಸುರಕ್ಷತೆಯ ಕಾರಣಕ್ಕಾಗಿ ಈ ಕಾನೂನಿನನ್ವಯ ಪೂರ್ವಾನುಮತಿ ಪಡೆದು ನಡೆಸುತ್ತಿರುವ ತಂತೀ ಸೌಕರ್ಯವನ್ನು ತಾನೇ ತಾತ್ಪೂರ್ತಿಕವಾಗಿ ವಶಪಡಿಸಿಕೊಳ್ಳಬಹುದು, ಮತ್ತು ಯಾರಿಂದಲೇ ಆಗಲೆ, ಬೇರೆಡೆ ಕಳಿಸಲೆಂದು ತಂತಿ ಕಛೇರಿಗೆ ಬಂದ ಅಥವಾ ಯಾರಿಗಾದರೂ ತಲುಪಿಸಲೆಂದು ತಂತಿ ಕಛೇರಿಗೆ ಬಂದ ಯಾವುದೇ ಸಂದೇಶವನ್ನು ಕಳುಹಿಸದಿರುವಂತೆ ಇಲ್ಲವೆ ತಲುಪಿಸದಿರುವಂತೆ ಅಥವಾ ಅದನ್ನು ನಡುವೆಯೇ ತಡೆಯುವಂತೆ, ಅಥವಾ ಅದರಲ್ಲೇನಿದೆಯೆಂದು ತಿಳಿದುಕೊಳ್ಳುವಂತೆ, ಅಥವಾ ಸರ್ಕಾರಕ್ಕೆ ತಿಳಿಸುವಂತ ಆಜ್ಞಾಪಿಸಬಹುದು. ಅಶ್ಲೀಲ ಹಾಗೂ ಅಸಭ್ಯ ಸಾಹಿತ್ಯ, ಚಿತ್ರ ಮುಂತಾದುವುಗಳನ್ನು ಅಂಚೆಯ ಮೂಲಕ ಸಾಗಿಸುವುದನ್ನು ಅಂಚೆ ಕಛೇರಿಗಳ ಅಧಿನಿಯಮ ಪ್ರತಿಬಂಧಿಸುತ್ತದೆ. ಅಲ್ಲದೆ ಪ್ರೆಸ್ ಮತ್ತು ಪುಸ್ತಕ ನೋಂದಣಿ ಅಧಿನಿಯಮದ ಆಶಯಗಳಿಗೆ ವ್ಯತಿರಿಕ್ತವಾದ ರೀತಿಯಲ್ಲಿ ಮುದ್ರಿಸಿ ಪ್ರಕಟಿಸಲಾದ ಪತ್ರಿಕೆಗಳನ್ನು ಅಂಚೆಯ ಮೂಲಕ ಸಾಗಿಸುವುದನ್ನು ಆ ಅಧಿನಿಯಮ ತಡೆಗಟ್ಟುತ್ತದೆ. ರಾಜದ್ರೋಹಾತ್ಮಕ ವಿಷಯವುಳ್ಳ ಮುದ್ರಿತ ಕಾಗದ ಅಥವಾ ಪತ್ರಿಕೆ ಅಥವಾ ಪುಸ್ತಕಗಳನ್ನು ದಾರಿಯಲ್ಲೇ ತಡೆದು ಹಿಡಿಯುವ ಅಧಿಕಾರವನ್ನು ಈ ಕಾನೂನು ಅಂಚೆ ಇಲಾಖೆಯ ಅಧಿಕಾರಿಗಳಿಗೆ ಕೊಡುತ್ತದೆ. ರಾಜದ್ರೋಹಾತ್ಮಕ ಸಭಾ ಪ್ರತಿಬಂಧಕ ಅಧಿನಿಯಮ ಅಂದಿನ ಬ್ರಿಟಿಷ್ ಭಾರತ ಬಳಸಿದ ಬಹು ದೊಡ್ಡ ಅಸ್ತ್ರ. ರಾಜದ್ರೋಹವನ್ನು ಪ್ರಚೋದಿಸಬಹುದಾದಂಥ, ಇಲ್ಲವೇ ಸಾರ್ವಜನಿಕ ಶಾಂತಿಗೆ ಭಂಗ ತರುವಂಥ ಯಾವುದೇ ಸಭೆಯನ್ನು ಪ್ರತಿಬಂಧಿಸುವ ಅಧಿಕಾರ ಈ ಮೂಲಕ ಸರ್ಕಾರಕ್ಕೆ ಸಿಗುತ್ತದೆ.

	ಅಲ್ಲದೆ ಪತ್ರಿಕೋದ್ಯಮಕ್ಕೆ ನೇರ ಸಂಬಂಧವುಳ್ಳ ಇನ್ನೂ ನಾಲ್ಕು ಕಾನೂನುಗಳು 1922ರಿಂದ 1934ರವರೆಗಿನ ಅವಧಿಯಲ್ಲಿ ಜಾರಿಗೆ ಬಂದುವು. 1922ರ ಭಾರತೀಯ ಸಂಸ್ಥಾನಗಳ ಅವಿಶ್ವಾಸ ವಿರೋಧಿ ರಕ್ಷಣೆ ಅಧಿನಿಯಮ (ಇಂಡಿಯನ್ ಸ್ಟೇಟ್ಸ್ ಪ್ರೊಟೆಕ್ಷನ್ ಅಗೆನ್ಸ್ಟ್ ಡಿಸ್-ಅಫೆಕ್ಷನ್ ಆಕ್ಟ್), 1931 ರ ಪ್ರೆಸ್ (ಜರೂರು ಅಧಿಕಾರಿಗಳ) ಅಧಿನಿಯಮ, 1932ರ ವಿದೇಶಿ ಸಂಬಂಧಗಳ ಅಧಿನಿಯಮ ಮತ್ತು 1934ರ ಭಾರತೀಯ ಸಂಸ್ಥಾನಗಳ (ರಕ್ಷಣಾ) ಅಧಿನಿಯಮ- ಇವು ಆ ನಾಲ್ಕು ಕಾನೂನುಗಳು. ಮುಂದೆ 1951ರಲ್ಲಿ ಪ್ರೆಸ್ (ಅನಪೇಕ್ಷಣೀಯ ವಿಷಯ) ಅಧಿನಿಯಮ ಸಂಸತ್ತಿನಲ್ಲಿ ಸ್ವೀಕೃತವಾಯಿತು. ಈ ಹೊಸ ಕಾನೂನಿನಲ್ಲಿ ಮೇಲೆ ಹೇಳಿದನಾಲ್ಕು ಕಾನೂನುಗಳಲ್ಲಿಯ ಹಲವು ಅಂಶಗಳನ್ನು ಸೇರಿಸಿಕೊಂಡು, ಬಿಡಿಬಿಡಿಯಾಗಿದ್ದ ಆ ಕಾನೂನುಗಳನ್ನು ರದ್ದಗೊಳಿಸಲಾಯಿತು.

	1948ರಲ್ಲಿ ಸ್ವತಂತ್ರ ಭಾರತ ಸರ್ಕಾರ ಪತ್ರಿಕಾ ಕಾನೂನುಗಳ ವಿಚಾರಣಾ ಸಮಿತಿಯನ್ನು (ಪ್ರೆಸ್ ಲಾಸ ಎನ್‍ಕ್ವೈರಿ ಕಮಿಟಿ) ನೇಮಿಸಿತು. ಭಾರತವೂ ಒಳಗೊಂಡಂತೆ ಜಗತ್ತಿನ ಪ್ರಮುಖದೇಶಗಳಲ್ಲಿಯ ಪತ್ರಿಕಾ ಕಾನೂನುಗಳನ್ನು ಪರಿಶೀಲಿಸುವ, ಅಂದು ಜಾರಿಯಲ್ಲಿದ್ದ ಪತ್ರಿಕಾ ಕಾನೂನುಗಳು ಆಗ ಸಂವಿಧಾನ ಸಮಿತಿ ರೂಪಿಸಿದ್ದ ಮೂಲಭೂತ ಹಕ್ಕುಗಳಿಗೆ ಅನುಗುಣವಾಗಿವೆಯೇ ಎಂಬುದನ್ನು ಪರೀಕ್ಷಿಸುವ, ಹಾಗೂ ಈ ಪರಿಶೀಲನೆಯ ಬೆಳಕಿನಲ್ಲಿ ಪತ್ರಿಕಾ ಕಾನೂನುಗಳನ್ನು ಯಾವ ರೀತಿ ಸುಧಾರಿಸಬೇಕೆಂದು ಶಿಫಾರಸು ಮಾಡುವ ಹೊಣೆಯನ್ನು ಈ ಸಮಿತಿಗೆ ವಹಿಸಿಕೊಡಲಾಗಿತ್ತು. ಪತ್ರಿಕೋದ್ಯಮಕ್ಕೆ ಮಾತ್ರವೇ ಸಂಬಂಧಿಸಿದ ಕಾನೂನುಗಳನ್ನು ತೆಗೆದು, ದೇಶದ ಸಾಮಾನ್ಯಕಾನೂನುಗಳಲ್ಲಿ ಈ ಅಂಶಗಳು ಅಡಕವಾಗಿರುವಂತೆ ಮಾಡಬೇಕೆಂದು ಈ ಸಮಿತಿ ಸೂಚಿಸಿತು. ಸಾಮಾಜಿಕ ಹಾಗೂ ಆರ್ಥಿಕ ಪರವರ್ತನೆಗಾಗಿ ನಡೆಯುವ ಶಾಂತಿಯುತ ಆಂದೋಲನಗಳನ್ನು ಕಾನೂನಿನ ನಿಷೇಧಾತ್ಮಕ ಕಕ್ಷೆಯ ಹೊರಗಿಡಬೇಕು ಎಂಬುದು ಇದು ಸೂಚಿಸಿದ ಒಂದು ಸುಧಾರಣೆ.

	1950ರ ಜನವರಿ 26ರಂದು ಸ್ವತಂತ್ರ ಭಾರತದ ಸಂವಿಧಾನ ಜಾರಿಗೆ ಬಂತು. ಭಾರತ ಗಣರಾಜ್ಯವೆಂದು ಘೋಷಿತವಾಯಿತು. ಸಂವಿಧಾನದ 19(1) (ಎ) ಅನುಚ್ಛೇದ ಪ್ರಪ್ರಥಮವಾಗಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಶಾಸನದ ಮನ್ನಣೆ ನೀಡಿತು. ಸಮಸ್ತ ನಾಗರಿಕರಿಗೂ ವಾಕ್ ಸ್ವಾತಂತ್ರ್ಯದ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಇರತಕ್ಕದ್ದು ಎಂದು ಹೇಳುವ ಈ ಅನುಚ್ಛೇದದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಸ್ಪಷ್ಟ ಉಲ್ಲೇಖವೆಲ್ಲೂ ಇಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಪತ್ರಿಕಾ ಸ್ವಾತಂತ್ರ್ಯ ಕೂಡ ಅಡಕವಾಗಿರುತ್ತಾದ್ದರಿಂದ ಅದನ್ನು ಪ್ರತ್ಯೇಕವಾಗಿ ಎತ್ತಿ ಹೇಳುವ ಅವಶ್ಯಕತೆ ಬೀಳಲ್ಲಿ. ಆದರೆ ಈ ಸ್ವಾತಂತ್ರ್ಯ ಸ್ವಯಂಪೂರ್ಣವಲ್ಲ. ಅದಕ್ಕೆ ಕೆಲವು ನಿಬಂಧನೆಗಳು ಪ್ರಾರಂಭದಿಂದಲೇ ಇದ್ದುವು. ಮಾನಹಾನಿ, ನ್ಯಾಯಾಲಯದ ಅವಮಾನ, ದೇಶದ ಭದ್ರತೆಗೆ ಗಂಡಾಂತರ, ಸರ್ಕಾರವನ್ನು ಉರುಳಿಸುವ ಗಂಡಾಂತರ, ಅಥವಾ ಔಚಿತ್ಯ ಇಲ್ಲವೇ ನ್ಶೆತಿಕತೆಯನ್ನು ಉಲ್ಲಂಘಿಸುವಂಥ ಪ್ರಸಂಗಗಳಲ್ಲಿ ಈ ಹಕ್ಕುಗಳು ಮೊಟಕುಗೊಳ್ಳಬಹುದಾಗಿದೆ. 

	ಆದರೆ ಸಂವಿಧಾನ ಜಾರಿಯಲ್ಲಿ ಬಂದ ಮರುವರ್ಷವೇ ಭಾರತಿ ಪ್ರೆಸ್ಸಿನ ಪ್ರಕರಣದಲ್ಲಿ ಪಟ್ನಾ ಉಚ್ಚ ನ್ಯಾಯಾಲಯ ನಿರ್ಣಯ ನೀಡುತ್ತ, ಯಾರೇ ಆಗಲಿ ಪತ್ರಿಕೆಯ ಮೂಲಕವೋ ಮೌಖಿ ಕಶಬ್ದದ ಮೂಲಕವೋ, ಕೊಲೆಯನ್ನೋ ಮತ್ತಾವುದೇ ಸಂಜ್ಞೇಯ ಅಪರಾಧವನ್ನೋ ನಿರ್ಭಯವಾಗಿ ಪ್ರಚೋದಿಸುತ್ತ ಹೋಗಬಹುದು. ಏಕೆಂದರೆ, ಸಂವಿಧಾನದ 19(2) ನೆಯ ಅನುಚ್ಚೇದದ ಉಪಬಂಧಗಳ ಅಳವಿನಲ್ಲಿ ಅದು ಬರುವುದಿಲ್ಲ, ಎಂದು ಸಾರಿತು. ಈ ನಿರ್ಣಯವನ್ನು ಮುಂದೆ 1952ರಲ್ಲಿ ಶೈಲಬಾಲಾದೇವಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿತಾದರೂ ಕೇಂದ್ರ ಸರ್ಕಾರ ಆಗಲೀ ಮುಂಜಾಗ್ರತೆಯ ಕ್ರಮ ಕೈಗೊಂಡಿತು. ಸಂವಿಧಾನಕ್ಕೆ ಮೊಟ್ಟ ಮೊದಲ ತಿದ್ದುಪಡಿಯನ್ನು ಸಂಸುತ್ತು ಸ್ವೀಕರಿಸಿತು. ಈ ತಿದ್ದುಪಡಿಯ ಪ್ರಕಾರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಇನ್ನೂ ಮೂರು ಕಾರಣಗಳಿಗಾಗಿ ಮೊಟಕುಗೊಳಿಸಬಹುದಾದ ಕಾನೂನುಗಳು ಆಗಲೇ ಅಸ್ತಿತ್ವದಲ್ಲಿದ್ದರೆ ಅವು ಸಿಂಧುವಾಗಿಯೇ ಉಳಿಯುವುವು; ಹಾಗೂ ಆ ದಿಸೆಯಲ್ಲಿ ಹೊಸ ಕಾನೂನುಗಳನ್ನು ಸಂಸತ್ತು ಸ್ವೀಕರಿಸಬಹುದು. 1. ವಿದೇಶಗಳೊಡನೆ ಮೈತ್ರಿಯ ಸಂಬಂಧಗಳು, 2. ಸಾರ್ವಜನಿಕ ಶಾಂತಿ ಮತ್ತು ಅಪರಾಧ ಪ್ರಚೋದನೆಗೆ ತಡೆ-ಇವೇ ಆ ಮೂರು ಕಾರಣಗಳು. ಆದರೆ ಈ ರೀತಿ ವಿಧಿಸಲಾಗುವು ನಿರ್ಬಂಧಗಳು ನ್ಯಾಯಸಮ್ಮತವಾದವಾಗಿರಬೇಕೆಂದು ಈ ತಿದ್ದುಪಡಿ ಹೇಳುತ್ತದೆ. ಅಂತೆಯೇ ಈ ಉಪವಿಧಿಯ ಅನ್ವಯ ವಿಧಿಸಲಾದ ನಿರ್ಬಂಧಗಳು ನ್ಯಾಯಸಮ್ಮತವೋ ಅಲ್ಲವೋ ಎಂದು ನಿರ್ಧರಿಸುವ ಅಧಿಕಾರ ಪ್ರಾಪ್ತವಾಯಿತು.

	1951ರ ಜೂನ್ 18ರಂದು ಸಂವಿಧಾನದ ಮೊದಲನೆಯ ತಿದ್ದುಪಡಿ ಜಾರಿಯಲ್ಲಿ ಬಂದರೆ ಅದೇ ವರ್ಷ ಆಗಸ್ಟ್ 31ರಂದು ಸಂಸತ್ತಿನಲ್ಲಿ ಪತ್ರಿಕಾ (ಆಕ್ಷೇಪಾರ್ಹ ಸಂಗತಿ) ವಿಧೇಯಕವನ್ನು ಮಂಡಿಸಲಾಯಿತು. ಅನಂತರ ಅದು ಸ್ವೀಕೃತವಾಗಿ ಅಧಿನಿಯಮವಾಗಿ ಬಂತು. ಈ ಕಾನೂನಿನ ಪ್ರಕಾರ ಸರ್ಕಾರಕ್ಕೆ ಪತ್ರಿಕೆಗಳಿಂದ ಜಾಮೀನು ಕೇಳುವ ಹಾಗೂ ನ್ಯಾಯಾಲಯದ ನಿರ್ಣಯದ ಪ್ರಕಾರ ಜಾಮೀನನ್ನು ಜಪ್ತು ಮಾಡುವ, ಕೆಲವು ಪ್ರಕಟಣೆಗಳನ್ನು ವಶಪಡಿಸಿಕೊಳ್ಳುವ, ಅನಧಿಕೃತ ವಾರ್ತಾಪತ್ರಗಳನ್ನು ಮುದ್ರಿಸುತ್ತಿರುವ ಮುದ್ರಣಾಲಯಗಳನ್ನು ವಶಪಡಿಸಿಕೊಂಡು ಮುಚ್ಚುವ, ಪ್ರಕಟಣೆಗಳು ಹಾಗೂ ಸಂದೇಶಗಳು ಅಂಚೆಯ ಮೂಲಕ ಸಾಗಾಟವಾಗುವುದನ್ನು ಪ್ರತಿಬಂಧಿಸುವ, ಮತ್ತು ಅನಧಿಕೃತ ವಾರ್ತಾಪತ್ರಗಳನ್ನೂ ಪತ್ರಿಕೆಗಳನ್ನೂ ವಶಪಡಿಸಿಕೊಂಡು ನಾಶಮಾಡುವ ಅಧಿಕಾರ ದೊರೆಯಿತು. ಈ ಕಾನೂನು ವ್ಯಾಪಕವಾದ ವಿರೋಧಕ್ಕೆ ಒಳಗಾಯಿತು. ಪತ್ರಿಕೆಗಳ ಮತ್ತು ವ್ಯಕ್ತಿಗಳ ವಿರುದ್ಧ ಸರ್ಕಾರಕ್ಕೆ ಸಾಮಾನ್ಯವಾಗಿ ಅಮಿತ ಅಧಿಕಾರವೇ ದೊರೆತಂತಾಗುತ್ತದೆಂದು ಟೀಕೆಗಳು ಬಂದವು. 1957ರಲ್ಲಿ ಸಂಸತ್ತು ಈ ಕಾನೂನನ್ನು ರದ್ದುಗೊಳಿಸಿತು.

	1951ರಿಂದ 1977 ವರಗಿನ ಅವಧಿಯಲ್ಲಿ ಪತ್ರಿಕೆಗಳಿಗೆ, ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಅನೇಕ ಕಾನೂನುಗಳು ಜಾರಿಗೆ ಬಂದುವು. 1975ರ ಜೂನ್ 26ರಂದು ದೇಶದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಜಾರಿಗೆ ಬಂದ ಅನಂತರ ಪತ್ರಿಕೆಗಳ ಮೂಲಭೂತ ಹಕ್ಕಾದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಚಕಾರ ಬಂತು; ಕೆಲವು ಕಾನೂನುಗಳು ಪೂರ್ತಿ ರದ್ದಾದುವು. 1977ರ ಮಾರ್ಚ್‍ಯಲ್ಲಿ ನಡೆದ ಲೋಕಸಭಾ ಚುನಾವಣೆಗಳ ಪರಿಣಾಮವಾಗಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಿಂದ ಇಳಿದ ಅನಂತರ ಪರಿಸ್ಥಿತಿಯನ್ನು ಪುನಃ ಪೂರ್ವಸಾಮಾನ್ಯ ಸ್ಥಿತಿಗೆ ತರಲು ಪ್ರಯತ್ನಗಳು ನಡೆದುವು. 2002ರಲ್ಲಿ ಮಾಹಿತಿ ಹಕ್ಕು ಕಾಯ್ದೆ ಪತ್ರಿಕೋದ್ಯಮಕ್ಕೆ ಪೂರಕವಾಗಿ ಬಂತು. ಈ ಅವಧಿಯಲ್ಲಿ ಬಂದ ವಿವಿಧ ಕಾನೂನುಗಳು ಇವು:

	1952ರ ನ್ಯಾಯಾಲಯ ಅವಹೇಳನ ಅಧಿನಿಯಮ : ಉಚ್ಚ ನ್ಯಾಯಾಲಯಗಳು ಹಾಗೂ ಸರ್ವೋಚ್ಚ ನ್ಯಾಯಾಲಯ ತಮ್ಮ ಹಾಗೂ ತಮ್ಮ ಕೆಳಗಿನ ನ್ಯಾಯಾಲಯಗಳ ಅವಹೇಳನಕ್ಕಾಗಿ ಶಿಕ್ಷೆ ವಿಧಿಸುವ ಅಧಿಕಾರವುಳ್ಳವಾಗಿವೆ.

	ವಿಧಾನಮಂಡಲ ಅವಹೇಳನ : ಸಂಸತ್ತಿನ ಹಾಗೂ ರಾಜ್ಯ ವಿಧಾನಮಂಡಲಗಳ ಸದಸ್ಯರಿಗೆ ಕೆಲವೊಂದು ವಿಶಿಷ್ಟ ಹಕ್ಕುಬಾಧ್ಯತೆಗಳನ್ನು ಸಂವಿಧಾನ ನಿಡಿದೆ. ಪತ್ರಿಕೆಗಳು ಅವನ್ನು ಉಲ್ಲಂಘಿಸಿದರೆ ಸಂಸತ್ತಿನ ಅಥವಾ ರಾಜ್ಯ ವಿಧಾನ ಮಂಡಲದ ಯಾವುದೇ ಸದನ ಅದಕ್ಕಾಗಿ ಶಿಕ್ಷೆ ವಿಧಿಸಬಹುದು.

	1954ರ ಪುಸ್ತಕಗಳ ಮತ್ತು ವೃತ್ತಪತ್ರಿಕೆಗಳ ಸಲ್ಲಿಕೆ (ಸಾರ್ವಜನಿಕ ಗ್ರಂಥಾಲಯಗಳು) ಅಧಿನಿಯಮ : 1956ರಲ್ಲಿ ಇದಕ್ಕೆ ಆದ ತಿದ್ದುಪಡಿಯ ಪ್ರಕಾರ ದೇಶದಲ್ಲಿಯ ನಾಲ್ಕು ಸಾರ್ವಜನಿಕ ಗ್ರಂಥಾಲಯಗಳಿಗೆ ಎಲ್ಲ ಪತ್ರಿಕೆಗಳೂ ತಮ್ಮ ಪ್ರತಿಗಳನ್ನು ಉಚಿತವಾಗಿ ಕಳುಹಿಸಿಕೊಡಬೇಕು.

	1954ರ ಔಷಧಿಗಳ ಮತ್ತು ಚಮತ್ಕಾರಿಕ ಪರಿಹಾರಗಳ (ಆಕ್ಷೇಪಾರ್ಹ ಜಾಹಿರಾತುಗಳು) ಅಧಿನಿಯಮ : ಗುಹ್ಯ ರೋಗಗಳ ನಿವಾರಣೆಗೆಂದು, ಲೈಂಗಿಕ ಶಕ್ತಿಯ ವರ್ಧನೆಗೆಂದು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಜಾಹೀರಾತುಗಳನ್ನು ಪ್ರತಿ ಬಂಧಿಸಿ ಸಾರ್ವಜನಿಕರಿಗೆ ಆಗಬಹುದಾದ ಆರೋಗ್ಯ ಹಾನಿಯನ್ನು ತಪ್ಪಿಸುವ ಅಧಿಕಾರನ್ನು ಈ ಕಾನೂನಿನ ಮೂಲಕ ಸರ್ಕಾರಕ್ಕೆ ನೀಡಲಾಗಿದೆ. 

	1955ರ ಬಹುಮಾನ ಸ್ಪರ್ಧೆಗಳ ಅಧಿನಿಯಮ : ಈ ಕಾನೂನು ಬಹುಮಾನವೀಯುವ ಸ್ಪರ್ಧೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ರಚಿತವಾಗಿದೆ. ತಿಂಗಳಿಗೆ ಒಂದು ಸಾವಿರ ರೂಪಾಯಿಗಳಿಗಿಂತ ಹೆಚ್ಚು ಬಹುಮಾನ ನೀಡುವುದನ್ನು ಇದು ಪ್ರತಿ ಬಂಧಿಸುತ್ತದೆ. ಒಂದು ಸಾವಿರ ರೂಪಾಯಿಗಳನ್ನು ಮೀರದಷ್ಟು ಬಹುಮಾನ ಕೊಡಲು ಉದ್ದೇಶಿಸಿದ ಸ್ಪರ್ಧೆಗಳಿಗೆ ಲೈಸೆನ್ಸ್ ನೀಡಲು ಇದು ಅವಕಾಶ ಕಲ್ಪಿಸಿದೆ. ಈ ಕಾನೂನಿಗೆ ವ್ಯತಿರಿಕ್ತವಾದ ಜಾಹೀರಾತುಗಳನ್ನು ಪ್ರಕಟಿಸಿದ ಪತ್ರಿಕೆಗಳನ್ನು ರಾಜ್ಯ ಸರ್ಕಾರಗಳು ಜಫ್ತು ಮಾಡಬಹುದು.

	1956ರ ಸಂಸದೀಯ ಪ್ರಕ್ರಿಯಾ (ಪ್ರಕಟಣ ರಕ್ಷಣೆ) ಅಧಿನಿಯಮ : ಸಂಸತ್ತಿನ ಯಾವುದೇ ಸದಸನದ ಕಲಾಪಗಳನ್ನು ತಥ್ಯದಲ್ಲಿ ಸರಿಯಾಗಿ ಪ್ರಕಟಿಸಿದ ಯಾವುದೇ ಪತ್ರಿಕೆಯನ್ನು ದೇಶದ ಯಾವುದೇ ಕಾನೂನಿನ ಅನ್ವಯ ತಪ್ಪಿತಸ್ಥವೆಂದು ಹಿಡಿಯಲು ಬರುವಂತಿಲ್ಲ ಎಂಬುದಾಗಿ ಈ ಕಾನೂನು ಪತ್ರಿಕೆಗಳಿಗೆ ರಕ್ಷಣೆ ನೀಡುತ್ತದೆ. ಪತ್ರಿಕೆಗಳಿಗೆ ಈ ಹಕ್ಕನ್ನು ಶಾಸನಬದ್ಧವಾಗಿ ನೀಡಿದ ಈ ಕಾನೂನನ್ನು ಲೋಕಸಭೆಯಲ್ಲಿ ಮಂಡಿಸಿದವರು ದಿವಂಗತ ಫಿರೋಜ್ ಗಾಂಧಿಯವರಾದ್ದರಿಂದ ಇದು ಫಿರೋಜ್ ಗಾಂಧಿ ಅಧಿನಿಯಮ ಎಂದೇ ಪ್ರಚಲಿತವಾಗಿದೆ. 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಸಾರಿದ ಅನಂತರ 1976ರಲ್ಲಿ ಸಂಸತ್ತು ಇದನ್ನು ರದ್ದುಪಡಿಸಿತ್ತು. 1976ರಲ್ಲಿ ಲೋಕ ಸಭೆಯ ಚುನಾವಣೆಯ ಅನಂತರ ಅಧಿಕಾಕ್ಕೆ ಬಂದ ಜನತಾ ಸರ್ಕಾರ ಇದನ್ನು ಪುನರುಜ್ಜೀವನಗೊಳಿಸಿತು.

	1956ರ ವೃತ್ತಪತ್ರಿಕಾ (ಬೆಲೆ ಮತ್ತು ಪುಟ) ಅಧಿನಿಯಮ : ಪತ್ರಿಕೆಗಳ ಪುಟ ಸಂಖ್ಯೆಯನ್ನು ಮತ್ತು ಅವುಗಳ ಮುಖಬೆಲೆಯನ್ನು ನಿರ್ಧರಿಸುವ ಅಧಿಕಾರವನ್ನು ಈ ಕಾನೂನು ನೀಡುತ್ತದೆ. ದೊಡ್ಡ ಪತ್ರಿಕೆಗಳು ಸಣ್ಣ ಪತ್ರಿಕೆಗಳಿಗೆ ಅನ್ಯಾಯವಾದ ಸ್ಪರ್ಧೆಯನ್ನು ಒಡ್ಡದಂತೆ ತಡೆಯುವುದು ಇದರ ಉದ್ದೇಶವಾಗಿದೆ.

	1957ರ ಕೃತಿಸ್ವಾಮ್ಯ ಅಧಿನಿಯಮ: ಲೇಖನಗಳು, ಸಾಹಿತ್ಯ ಕೃತಿಗಳು,ನಾಟಕಗಳು, ಸಂಗೀತ ಮತ್ತು ಕಲಾತ್ಮಕ ಕೃತಿಗಳು, ಚಲನಚಿತ್ರಗಳು ಮುಂತಾದವುಗಳ ಕರ್ತರ ಹಕ್ಕುಗಳನ್ನು ಸಂರಕ್ಷಿಸುವುದು ಈ ಕಾನೂನಿನ ಉದ್ದೇಶ.

	1955ರ ಕಾರ್ಯನಿರತ ಪತ್ರಕರ್ತರ (ಸೇವಾ ಪರಿಸ್ಥಿತಿ) ಮತ್ತು ಸಂಕೀರ್ಣ ಉಪಬಂಧಗಳ ಅಧಿನಿಯಮ ಮತ್ತು 1974ರಲ್ಲಿ ಅದಕ್ಕೆ ಆದ ತಿದ್ದುಪಡಿ : ಕಾರ್ಯನಿರತ ಪತ್ರಿಕೋದ್ಯಮಿಗಳ ಸೇವೆಯನ್ನು ಕ್ರಮಬದ್ಧಗೊಳಿಸುವ ಉದ್ದೇಶದಿಂದ 1955ರಲ್ಲಿ ರಚಿತವಾದ ಈ ಕಾನೂನನ್ನು 1974ರಲ್ಲಿ ಒಂದು ತಿದ್ದುಪಡಿಯಮೂಲಕ ಪತ್ರಿಕಾ ಕಾರ್ಯಾಲಯಗಳಲ್ಲಿ ದುಡಿಯುವ ಪತ್ರಕರ್ತೇತರ ನೌಕರರಿಗೂ ಅನ್ವಯಿಸಲಾಗಿದೆ. 1958ರ ಕಾರ್ಯನಿರತ ಪತ್ರಕರ್ತರ (ವೇತನ ದರ ನಿರ್ಧಾರಣ) ಅಧಿನಿಯಮ ಇದಕ್ಕೆ ಅನುಬಂಧಿಯಾದನ ಕಾನೂನು. ಇದರ ಮೂಲಕ ಕಾರ್ಯನಿರತ ಪತ್ರಿಕೋದ್ಯಮಿಗಳ ವೇತನಶ್ರೇಣಿಗಳನ್ನು ಪುನರ್ವಿಮರ್ಶಿಸಲು ಕಾಲಕಾಲಕ್ಕೆ ವೇತನ ಮಂಡಳಿಗಳನ್ನು ನೇಮಿಸಲಾಗುತ್ತದೆ. 1974ರ ತಿದ್ದುಪಡಿಯಿಂದಾಗಿ ಪತ್ರಕರ್ತೇತರ ನೌಕರರಿಗಾಗಿ ನೇಮಿಸಲಾಗುವ ವೇತನ ಮಂಡಳಿಗಳೂ ಈಗ ಶಾಸನಬದ್ಧವೆನಿಸಿವೆ.

	1956ರ ಕಿರಿಯ ಜನರ (ಅಪಾಯಕರ ಪ್ರಕಟಣೆ) ಅಧಿನಿಯಮ : ಎಳೆಯರು ಮತ್ತು ಯುವಕರ ಮೇಲೆ ದುಷ್ಪರಿಣಾಮ ಬೀರುವಂಥಪ್ರಕಟಣೆ ಮುಂತಾದ ಚಟುವಟಿಕೆಗಳನ್ನು ಈ ಕಾನೂನು ಶಿಕ್ಷಾರ್ಹ ಅಪರಾಧವೆಂದು ಸಾರುತ್ತದೆ.

	1963ರ ಭಾರತೀಯ ಸರ್ಕಾರಿ ಗೋಪ್ಯ ಅಧಿನಿಯಮ : ದೇಶದ ಭದ್ರತೆಗೆ ಗಂಡಾಂತರಕಾರಿಯಾದಂಥ ಮತ್ತು ಶತ್ರುವಿಗೆ ಉಪಯುಕ್ತವಾಗುವಂಥ ಯಾವುದೇ ಕೃತಿಯನ್ನು ಈ ಕಾನೂನು ಪ್ರತಿಬಂಧಿಸುತ್ತದೆ.

	1969ರ ಪತ್ರಿಕಾ ಏಕಸ್ವಾಮ್ಯಗಳ ಮತ್ತು ನಿರ್ಬಂಧಕ ವ್ಯಾಪಾರ ಪದ್ಧತಿಗಳ ಅಧಿನಿಯಮ : ಕೆಲವೇ ವ್ಯಕ್ತಿಗಳು, ಗುಂಪುಗಳು ಅಥವಾ ಸಂಸ್ಥೆಳ ಕೈಯಲ್ಲಿ ಆರ್ಥಿಕಶಕ್ತಿ ಕೇಂದ್ರೀಕೃತವಾಗದಂತೆ ಜಾಗ್ರತೆ ವಹಿಸುವುದಕ್ಕೆ ಈ ಕಾನೂನು ಅವಕಾಶ ಮಾಡಿಕೊಡುತ್ತದೆ. ಉದ್ಯಮರಂಗದಲ್ಲಿಯ ಇತರ ಸಂಸ್ಥೆಗಳಂತೆಯೇ ದೊಡ್ಡ ಪತ್ರಿಕಾ ಸಂಸ್ಥೆಗಳು ಕೂಡ ಇದರ ಅಳವಿನಲ್ಲಿ ಬರುತ್ತವೆ.

	1965ರ ಪತ್ರಿಕಾ ಮಂಡಲಿ ಅಧಿನಿಯಮ : ಪತ್ರಿಕಾ ಕ್ಷೇತ್ರದಲ್ಲಿ ಸತ್ಸಂಪ್ರದಾಯಗಳನ್ನು ರೂಢಿಸುವ ಉದ್ದೇಶದಿಂದ 1965ರಲ್ಲಿ ಭಾರತ ಸರ್ಕಾರ ಈ ಕಾನೂನಿನ ಮೂಲಕ ಪತ್ರಿಕಾ ಮಂಡಲಿ ಒಂದನ್ನು ನೇಮಿಸಿತು. 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಅನಂತರ ಸರ್ಕಾರ ಈ ಕಾನೂನನ್ನು ರದ್ದುಗೊಳಿಸಿತಲ್ಲದೆ ಆಗ ಇದ್ದ ಪತ್ರಿಕಾ ಮಂಡಲಿಯ ಅವಧಿ 1975ರ ಡಿಸೆಂಬರ್ 31ಕ್ಕೆ ಮುಗಿದ ಅನಂತರ ಅದರ ಆಸ್ತಿಪಾಸ್ತಿಗಳನ್ನು ವಶಪಡಿಸಿಕೊಂಡಿತು. 1977ರಲ್ಲಿ ಜನತಾ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಮಂಡಲಿಯನ್ನು ಪುನರುಜ್ಜೀವನಗೊಳಿಸುವ ಕ್ರಮ ತೆಗೆದುಕೊಂಡಿತು.

	1972ರ ವೃತ್ತಪತ್ರಿಕಾ (ಬೆಲೆ ನಿಯಂತ್ರಣ) ಅಧಿನಿಯಮ : ಸಾರ್ವಜನಿಕ ಹಿತ ದೃಷ್ಟಿಯಿಂದ ಪತ್ರಿಕೆಗಳ ಮುಖಬೆಲೆಯನ್ನು ನ್ಯಾಯವಾದ ಮಟ್ಟದಲ್ಲಿರುವಂತೆ ನಿಯಂತ್ರಿಸುವುದು ಈ ಕಾನೂನಿನ ಉದ್ದೇಶ. ಮೊದಲು ಯೋಚಿಸಿದಂತೆ ಈ ಕಾನೂನು ಜಾರಿಗೆ ಬಂದ ಎರಡು ವರ್ಷಗಳ ಅನಂತರ ನಿಷ್ಕ್ರಿಯವಾಗಬೇಕಿತ್ತು.

	1976ರ ಆಕ್ಷೇಪಾರ್ಹ ವಿಷಯ ಪ್ರಕಟಣ ನಿರೋಧ ಅಧಿನಿಯಮ : 1975ರ ಜೂನ್ 25ರಂದು ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿತವಾದ ಅನಂತರ ಕೇಂದ್ರ ಸರ್ಕಾರ ಕೈಗೊಂಡ ಪ್ರಥಮ ಕ್ರಮವೆಂದರೆ ದೇಶದ ಎಲ್ಲ ಪತ್ರಿಕೆಗಳ ಮೇಲೆ ಭದ್ರ ನಿಯಂತ್ರಣವನ್ನು ಸ್ಥಾಪಿಸಿದ್ದು. ಎಲ್ಲ ವಾರ್ತೆಗಳನ್ನು ಪೂರ್ವಪರಿಶೀಲನದ ಕಟ್ಟಿಗೆ ಒಳಪಡಿಸುವುದರ ಮೂಲಕ ಸರ್ಕಾರ ತನ್ನ ಕೈಗಳನ್ನು ಮತ್ತಷ್ಟು ಬಲಪಡಿಸಿಕೊಂಡಿತು. ಮೊದಲ ಒಂದು ಸುಗ್ರೀವಾಜ್ಞೆಯ ಮೂಲಕ ಸರ್ವ ಅಧಿಕಾರಗಳನ್ನೂ ಸ್ವಾಧೀನಪಡಿಸಿಕೊಂಡ ಅನಂತರ 1976ರಲ್ಲಿ ಸಂಸತ್ತಿನಲ್ಲಿ ವಿಧೇಯಕವೊಂದನ್ನು ಮಂಡಿಸಿ ತನ್ನ ಕೃತಿಗೆ ಕಾನೂನಿನ ಸ್ವರೂಪ ಕೊಟ್ಟಿತು. 1951ರಲ್ಲಿ ಜಾರಿಗೆ ಬಂದಿದ್ದ ಇಂಥದೇ ಕಾನೂನು ತೀವ್ರ ಟೀಕೆಗೆ ಗುರಿಯಾಗಿ 1957ರಲ್ಲಿ ಜಾರಿಗೆ ಬಂದಿದ್ದ ಇಂಥದೇ ಕಾನೂನು ತೀವ್ರ ಟೀಕೆಗೆ ಗುರಿಯಾಗಿ 1957ರಲ್ಲಿ ರದ್ದಾಗಿತ್ತು. ಈ ಕಾನೂನು ಅದಕ್ಕಿಂತ ಹೆಚ್ಚ ತೀವ್ರ ಸ್ವರೂಪದ್ದಾಗಿತ್ತು. 1951ರ ಕಾನೂನಿನಲ್ಲಿದ್ದ ಎಲ್ಲ ನಿಷೇಧಗಳೊಂದಿಗೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ,ಕೇಂದ್ರ ಮಂತ್ರಿಮಂಡಲದ ಸದಸ್ಯರು, ಲೋಕಸಭಾಪತಿ, ರಾಜ್ಯಪಾಲರು ಮುಂತಾದವರಿಗೆ ಮಾನಹಾನಿಕರವಾದಂಥ ಏನನ್ನೂ ಯಾರೂ ಪ್ರಕಟಿಸುವಂತಿರಲಿಲ್ಲ. ಜನತಾ ಸರ್ಕಾರ 1977ರಲ್ಲಿ ಅಧಿಕಾರ ವಹಿಸಿಕೊಂಡ ಕೂಡಲೆ ಈ ಕಾನೂನನ್ನು ರದ್ದುಗೊಳಿಸವ ಕ್ರಮ ತೆಗೆದುಕೊಂಡಿತು.

	1975ಕ್ಕೆ ಮುಂಚೆ ಚೀನ ಮತ್ತು ಪಾಕಿಸ್ತಾನಗಳೊಂದಿಗೆ ಸಶಸ್ತ್ರ ಘರ್ಷಣೆಗಳಾದಕಾಲದಲ್ಲಿ ಸುದ್ದಿಗಳ ಪೂರ್ವಪರಿಶೀಲನೆಯನ್ನು ಹೇರಲಾಗಿತ್ತಾದರೂ ಅದು ಹಿಂದೆಂದೂ ಶಾಸನದ ಅಡಿಯಲ್ಲಿ ಶಾಶ್ವತ ಕ್ರಮವಾಗಿರಲಿಲ್ಲ. ತುರ್ತು ಪರಿಸ್ಥಿತಿ ಕೊನೆಗೊಂಡು ಹೊಸ ಸರ್ಕಾರ ಬಂದ ಅನಂತರ ಪ್ರಜಾಪ್ರಭುತ್ವದ ಪರಿಣಾಮಕಾರಿ ಅಂಗವೆನಿಸಿದ ಪತ್ರಿಕೋದ್ಯಮದ ಸ್ವಾತಂತ್ರ್ಯವನ್ನು ಮುಂದಿನ ಯಾವುದೇ ಸರ್ಕಾರ ಅಪಹರಿಸದಂತೆ ವ್ಯವಸ್ಥೆ ಮಾಡುವ ಆಶ್ವಾಸನೆ ನೀಡಿದೆ. 		
  (ಎಂ.ಎನ್.ಎಂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ